BhajaGovindam Shloka # 2
Home/Uncategorized / BhajaGovindam Shloka # 2
BhajaGovindam Shloka # 2

ಶ್ರುತಿ ಸ್ಮೃತಿ ಪುರಾಣಂ ಆಲಯಂ ಕರುಣಾಲಯಂ |  ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಂ ||

श्रुति स्मृति पुराणानां आलयं करुणालयाम् | नमामि भगवत्पादं शंकरं लॊक शंकरम् ||

ಶ್ರೀ ಶಂಕರಾಚಾರ್ಯ ವಿರಚಿತ  ಭಜ ಗೋವಿಂದಂ ಭಜ ಗೋವಿಂದಂ . . . .  ಶ್ಲೋಕ 2. 

ಧನ ಕನಕ ಸಂಪತ್ತು ಯಾರಿಗೆ ಬೇಡ? ಎಲ್ರಿಗೂ  ಬೇಕು ಅಲ್ವಾ. ನಮ್ಮ ಅಗತ್ಯ, ಬಯಕೆ ಎಲ್ಲವನ್ನೂ ಸಾಧ್ಯವಾಗಿಸೋದೇ ಹಣ. ಲೌಕಿಕವಾಗಿ, ವ್ಯಾವಹಾರಿಕವಾಗಿ ಚಲಾವಣೆಯಲ್ಲಿರೋದೆ ದುಡ್ಡು, ಧನಸಂಪತ್ತು.

ನಮ್ಮಲ್ಲಿ ಧನ ಸಂಪಾದನೆಯನ್ನ ಒಂದು ಪುರುಷಾರ್ಥವಾಗಿ ಪರಿಗಣಿಸಲಾಗಿದೆ. (ಧರ್ಮಾರ್ಥಕಾಮ ಕೊನೆಯದಾಗಿ ಮೋಕ್ಷ). ಹೌದಾದ್ರೆ, ನಾವು ಹೇಗೆಲ್ಲ ಬೇಕಾದ್ರೂ ಧನ ಸಂಪಾದನೆ ಮಾಡಬಹುದೇ?. ಒಂದು ಚಿಂತನ ಮಂಥನ ಈ ಶ್ಲೋಕದಲ್ಲಿದೆ. 

ಮೊದಲಿಗೆ, ಇದರ ಬಗ್ಗೆ ಆಧ್ಯಾತ್ಮಿಕವಾಗಿ ಉಪನಿಷದ್ಗಳಾದಿಯಾಗಿ ಏನೆಲ್ಲಾ ಚಿಂತನ ಮಂಥನ ಮಾಡಿವೆ, ಯಾರೆಲ್ಲಾ ಏನೆಲ್ಲಾ ಹೇಳಿದಾರೆ ಎಲ್ಲವನ್ನೂ ಅಲ್ದಿದ್ರೂ ಕೆಲವನ್ನ ಸ್ವಲ್ಪ ನೋಡೋಣ. 

"ನ ವಿತ್ತೇನ ತರ್ಪಣೀಯೋ ಮನುಷ್ಯಃ" ಅಂತ ಕಠೋಪನಿಷತ್ ನಲ್ಲಿ ಹೇಳಿದೆ. ಅಂದ್ರೆ, ಮನುಷ್ಯನನ್ನು ಹಣದಿಂದ ತೃಪ್ತಿಗೊಳಿಸಲು ಸಾಧ್ಯವಿಲ್ಲ. (ನ ತರ್ಪಣೀಯಃ ಅಂದ್ರೆ ತೃಪ್ತಿ ಪಡತಕ್ಕವಲ್ಲ). 

'ಬೃಹದಾರಣ್ಯಕೋಪನಿಷದ್' ನಲ್ಲಿ " "ಅಮೃತತ್ವಸ್ಯ ತು ನಾ ಶಾಸ್ತಿ ವಿತ್ತೇನಾ . . ." ಅಂದ್ರೆ ಸಂಪತ್ತಿನಿಂದ ಅಮರತ್ವ ಸಿಗತ್ತೆ ಅನ್ನೋಬಗ್ಗೆ ಭರವಸೆ ಇಲ್ಲ ಅಂತ ಮೈತ್ರೆಯೀಯ ಪ್ರಶ್ನೆಗೆ ಯಾಜ್ಞವಲ್ಕ್ಯರು ಹೇಳ್ತಾರೆ. 

ಡಿ.ವಿ.ಜಿ. ಯವರಂತೂ ಧನ ಮೋಹದ ಬಗ್ಗೆ ಹೇಳಿರೋದು ನೋಡಿ -

ಬೇಕು ಬೇಕದು ಬೇಕು ಬೇಕಿದೆನಗಿನ್ನೊಂದು । ಬೇಕೆನುತ ಬೊಬ್ಬಿಡುತಲಿಹ ಘಟವನಿದನು ॥

ಏಕೆಂದು ರಚಿಸಿದನೊ ಬೊಮ್ಮನೀ ಬೇಕು ಜಪ । ಸಾಕೆನಿಪುದೆಂದಿಗೆಲೊ - ಮಂಕುತಿಮ್ಮ ॥ 

ಇದನ್ನೇ ಕ.ವೆಂ.ನಾಗರಾಜ್ ಅನ್ಕೋತೀನಿ - ಇನ್ನೊಂದು ರೀತಿಯಲ್ಲಿ ಹೇಳಿದಾರೆ.

ಬೇಕು ಬೇಕೆಂಬುದಕೆ ಕೊನೆಯೆಂಬುದೆಲ್ಲಿ? ಬಯಸಿದ್ದು ಸಿಕ್ಕಲ್ಲಿ ಮತ್ತಷ್ಟು ಬೇಕು ಮತ್ತಷ್ಟು |

ಸಿಕ್ಕಲ್ಲಿ ಮಗದಷ್ಟು ಬೇಕೆಂಬುದಕೆ ಕಾರಣವು ಕಾಮ, ಅದಕಿಲ್ಲ ಪೂರ್ಣ ವಿರಾಮ ಮೂಢ ||

ಪುರಂದರ ದಾಸರೂ ' ದುಗ್ಗಾಣಿ ಬಲು ಕೆಟ್ಟದಣ್ಣಾ . .  ಮಾನವಾಗಿರಿಸೋದು ದುಗ್ಗಾಣಿ . . ಹದಗೆಡಿಸೋದು ದುಗ್ಗಾಣಿ . . ಅಂತ ಅದರ ಬೇಕು ಬೇಡ ಗಳನ್ನೂ ಹೇಳ್ತಾರೆ. 

ಹೀಗೇ ವಚನ ಸಾಹಿತ್ಯ, ಶುಭಾಷಿತಗಳಲ್ಲಿ ಆಧ್ಯಾತ್ಮಿಕ ಕೃತಿಗಳಲ್ಲಿ, ಶುಭಾಷಿತಗಳಲ್ಲಿ ಅನೇಕ ಚಿಂತನೆಗಳನ್ನ  ಉದಾಹರಣೆಗಳನ್ನ ನೋಡ್ತಾ ಹೋಗಬಹುದು.

ಎಲ್ರೂ ಹೀಗೆ ಧನ ಸಂಪಾದನೇ ಬಗ್ಗೆ, ಗುಣಾವಗುಣಗಳನ್ನ ಹೇಳ್ತಾ ಅವಗುಣಗಳನ್ನ ಎತ್ತಿ ತೋರಿಸ್ತಾ ಹೋಗ್ತಾರೆ.  ಹಾಗಂತ ಧನ ಸಂಪಾದನೆ, ಸಂಪತ್ತು ಬೇಡವೆನ್ನೋದಕ್ಕೆ ಆಗುತ್ಯೇ? ನಮ್ಮ  ಜೀವನ ನಡೆಯೋದು ಹೇಗೆ?.  ಇಲ್ಲೇ ಸ್ವಲ್ಪ ಧರ್ಮ ಸೂಕ್ಷ್ಮ ಇರೋದು. 

ಅರ್ಥ ಅನ್ನೋದು ಒಂದು ಪುರುಷಾರ್ಥ ವಾಗಿ ಅವನ ವಿಕಸನಕ್ಕೆ ದಾರಿಯಾಗಬೇಕು.  ಆದ್ರೆ ಈಗ ಏನಾಗ್ತಿದೆ ಅರ್ಥಸಂಪಾದನೆ ವಿಕಸನಕ್ಕೆ ದಾರಿಯಾಗದೇ ಅಡ್ಡಗೋಡೆಯಂತೆ ತಡೆಯಾಗ್ತಿದೆ.  

ಇದನ್ನೇ ಮನದಲ್ಲಿಟ್ಕೊಂಡು, ಪ್ರಸ್ತುತ ಶ್ಲೋಕದಲ್ಲಿ ಶಂಕರಾಚಾರ್ಯರು ಇದಕ್ಕೆ ನಮಗೆ ಪರಿಹಾರ ರೂಪದಲ್ಲಿ ಮಾರ್ಗಸೂಚಿ ತೋರಿಸ್ಕೊಡ್ತಿದಾರೆ.  ಸಾಮಾನ್ಯವಾಗಿ, ಸಂಪತ್ತನ್ನು ಗಳಿಸುವ ಅತಿಯಾದ ಆಸೆಯು ಮನುಷ್ಯನನ್ನು ಖಿನ್ನನನ್ನಾಗಿಸಿ, ನೈತಿಕವಾಗಿ ಮನಃಕ್ಲೇಶವನ್ನುಂಟು ಮಾಡಬಹುದು, ಚಿಂತೆಗೂ ಕಾರಣವಾಗಬಹುದು.  ಹಾಗೆಯೇ ಅದನ್ನು ಕಾಪಾಡುವ ಯತ್ನದಲ್ಲಿ ಅತಿಯಾದ ಒತ್ತಡಗಳನ್ನು ಅನುಭವಿಸ ಬೇಕಾಗ ಬಹುದು. ಯಾವಾಗಲೂ ಸಂಪತ್ತು ನಮಗೆ ಸಂತೋಷವನ್ನು ತಂದುಕೊಡುತ್ತದೆ ಎಂದು ಭಾವಿಸೋದು ಮೂರ್ಖತನ. ಮನುಷ್ಯನಿಗೆ ಎಷ್ಟು ಸಂಪತ್ತು ಇದ್ದರೂ ತೃಪ್ತಿ ಇರುವುದಿಲ್ಲ, ಸಮಚಿತ್ತ ಹಾಗೂ ಶಾಂತಜೀವನ ನಡೆಸಲು ಸಂಪತ್ತನ್ನು ಗಳಿಸುವುದಕ್ಕೆ ಒಂದು ಇತಿ ಮಿತಿಯನ್ನು ಹಾಕಿಕೊಳ್ಳಬೇಕು. 

ಧನ ಸಂಪಾದನೆ ಬೇಕು ಆದ್ರೆ ಎಲ್ಲವೂ ಧರ್ಮದ ಚೌಕಟ್ಟಿನಲ್ಲಿ ಒಂದು ಮಿತಿಯಲ್ಲಿರಬೇಕು, ಅತಿಯಾದರೆ ನಮ್ಮ ಶಾಂತಿ, ನೆಮ್ಮದಿ ಕಳ್ಕೊಂಡು ಖಿನ್ನ ಮನಸ್ಕರಾಗ್ತೀವಿ ಅಂತ ಎಚ್ಚರಿಸ್ತಾರೆ. ಪ್ರಾಮಾಣಿಕವಾಗಿ, ನ್ಯಾಯಯುತವಾಗಿ ದುಡಿದ ಫಲವಾಗಿ ಬರುವ ಸಂಪತ್ತು ಹಾನಿಕರವಲ್ಲ. ಮುಖ್ಯವಾಗಿ, ನಾವು ತ್ಯಜಿಸಬೇಕಾಗಿರುವುದು ದುರಾಸೆಯನ್ನು, ವ್ಯಾಮೋಹವನ್ನು.  ಅದನ್ನು ತ್ಯಜಿಸಿದಾಗಲೇ ನಾವು ಪ್ರಪಂಚದಲ್ಲಿ ಸುಖಿಗಳಾಗಿರಲು ಸಾಧ್ಯ ಅಂತ ಹೇಳ್ತಾರೆ.  

ಶ್ರೀ ಶಂಕರಾಚಾರ್ಯರ ಅಭೀಷ್ಟ - ನಮ್ಮ ಮನಸ್ಸನ್ನು ಪ್ರಾಪಂಚಿಕ ವಸ್ತುಗಳಿಂದ ಪ್ರತ್ಯೇಕಿಸುವುದು. ಅವರ ಆಕ್ಷೇಪಣೆ ಇರುವುದು ನಮ್ಮಲ್ಲಿ ಉಂಟಾಗಬಹುದಾದ ಧನದಾಹದ "ದುರಾಸೆ"ಗೆ ಮಾತ್ರ.  ನಾವು ಅದಕ್ಕೆ ಶರಣಾದರೆ ಆಸೆಗೆ ಇತಿ ಮಿತಿಯೇ ಇರಲ್ಲ ಅಲ್ವಾ. ಇದನ್ನ ಅರ್ಥೈಸಿಕೊಳ್ತಾ ಶ್ಲೋಕಾರ್ಥ ಗ್ರಹಿಸೋಣ -

मूढ जहीहि धनागमतृष्णां
कुरु सद्बुद्धिम् मनसि वितृष्णाम् |
यल्लभसे निज कर्मोपात्तं
वित्तं तेन विनोदय चित्तम् ‖ 2 ‖

mūḍha jahīhi dhanāgamatṛśhṇāṃ
kuru sadbuddhim manasi vitṛśhṇām |
yallabhase nija karmopāttaṃ
vittaṃ tena vinodaya chittam ‖ 2 ‖

ಮೂಢ ಜಹೀಹಿ ಧನಾಗಮತೃಷ್ಣಾಮ್ ಕುರುಸದ್ಬುದ್ಧಿಂ ಮನಸಿ ವಿತೃಷ್ಣಾಮ್ |
ಯಲ್ಲಭಸೇ ನಿಜ ಕರ್ಮೋಪಾತ್ತಂ ವಿತ್ತಂ ತೇನ ವಿನೋದಯ ಚಿತ್ತಮ್ ||2||

ಇದರ ಅನುವಾದ ಹೀಗಿದೆ:
ತೊರೆಯಲೆ ಮೂಢನೆ ಧನದಾಹವನು, ಸುಬುದ್ಧಿಯಿಂ ಪಡೆ ತೃಪ್ತಿಯ ಮನದಲಿ
ನೀ ದುಡಿದುದರಿಂದೇಂ ಪಡೆಯುವೆಯೋ ಅದರಲೆ ನಿನ್ನಯ ಮನವನು ತಣಿಸು ||

ಸ್ಥೂಲಾರ್ಥ:

ಎಲೈ ಮೂಢ..! ಹಣವು ಬರಲೆಂಬ ಆಸೆಯನ್ನು (ಧನದಾಹವನ್ನು) ಬಿಡು. ಮನಸ್ಸಿನಲ್ಲಿರುವ ಆಸೆಯನ್ನು ತೊರೆದು ಸದ್ವಿಚಾರವನ್ನು ಮಾಡ ಬೇಕೆಂಬ ಬುದ್ಧಿಯನ್ನು ತಂದುಕೊ. ನೀನು ಮಾಡುವ ಕೆಲಸದಿಂದ (ನಿಜ ಕರ್ಮೋಪಾತ್ತಂ - ನಿಜ+ಕರ್ಮಾ+ಉಪಾತ್ತಮ್ ನಿನ್ನ ನಿಜ ದುಡಿತದಿಂದ) ಎಷ್ಟು ಹಣ ನಿನಗೆ ದೊರೆಯುತ್ತದೆಯೋ ಅಷ್ಟನ್ನು ಬಳಸಿ ಮನಸ್ಸಿಗೆ ತೃಪ್ತಿಯನ್ನು ತಂದುಕೊ (ವಿನೋದಯ ಚಿತ್ತಮ್).

(ಯಲ್ಲಭಸೇ  - ಯತ್ + ಲಭಸೇ, ತೃಷ್ಣಾ ಅಂದ್ರೆ ದಾಹ,  ವಿತೃಷ್ಣಾ ಅಂದ್ರೆ ದಾಹರಹಿತ ವಾದದ್ದು).  

ಶಂಕರ ಭಗವತ್ಪಾದರು ಇಲ್ಲಿ ಹೇಳೋದು, "ಮೂಢ ಜಹೀಹಿ ಧನಾಗಮತೃಷ್ಣಾಮ್ " ಅಂದ್ರೆ ಹಣವು ಬರಲೆಂಬ ಆಸೆಯನ್ನು (ಧನದಾಹವನ್ನು) ಬಿಡು, ಧನ ಮೋಹಿತನಾಗಿ, ಅದಕ್ಕೇ ಆದ್ಯತೆ, ಪ್ರಾಮುಖ್ಯತೆ ಕೊಟ್ರೆ ಮೂಢ ಮತ್ತು ಅವಿವೇಕಿಯಾಗ್ತೀಯ ಅಂತ. 

ಶಂಕರ ಭಗವತ್ಪಾದರು, ಮುಂದುವರೆಯುತ್ತಾ - 'ಕುರುಸದ್ಬುದ್ಧಿಂ ಮನಸಿ ವಿತೃಷ್ಣಾಮ್ '- ಮನಸ್ಸಿನಲ್ಲಿರುವ (ಧನದಾಹ) ಆಸೆಯನ್ನು ತೊರೆದು ಸದ್ವಿಚಾರವನ್ನು ಮಾಡಬೇಕೆಂಬ ಬುದ್ಧಿಯನ್ನು ತಂದುಕೊ. Develop a desire for righteousness in your mind ಅಂತ ಹೇಳ್ತಾರಲ್ಲ ಹಾಗೆ ಮತ್ತು 

'ಯಲ್ಲಭಸೇ ನಿಜ ಕರ್ಮೋಪಾತ್ತಂ ವಿತ್ತಂ ತೇನ ವಿನೋದಯ ಚಿತ್ತಮ್' - ಅಂದ್ರೆ ನೀನು ಮಾಡುವ ಕೆಲಸದಿಂದ (ನಿಜ ಕರ್ಮೋಪಾತ್ತಂ) ಅಂದ್ರೆ ನಾವು ಮಾಡುವ ಯಾವುದೇ ಉದ್ಯೋಗದಿಂದ  ಎಷ್ಟು ಹಣ ಸಂಪಾದನೆ ಆಗುತ್ತದೆಯೋ, ದೊರೆಯುತ್ತದೆಯೋ ಅಷ್ಟನ್ನು ಬಳಸಿ ಮನಸ್ಸಿಗೆ ತೃಪ್ತಿಯನ್ನು ತಂದುಕೊ. - satisfy your mind with whatever wealth you acquire through your true work, through that

त्रिविधं नरकस्येदं द्वारं नाशनमात्मन: |
काम: क्रोधस्तथा लोभस्तस्मादेतत्त्रयं त्यजेत् || BhagavadGeeta 16.21||

ಎಲ್ಲರಲ್ಲೂ ಅಲ್ದಿದ್ರೂ ಕೆಲವರಲ್ಲಿ  ಧನದಾಹ, ಸಂಪಾದನೆ ಅನ್ನೋದು ಮಿತಿ ಮೀರಿ ಎಷ್ಟರ ಮಟ್ಟಿಗೆ ಆಗ್ಬಿಟ್ಟಿದೆ ಅಂದ್ರೆ 'ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷೋಭವ' ಅಂತಾರಲ್ಲ ಹಾಗೆ ಏನಕೇನ ಪ್ರಕಾರೇಣ ಧನ ಸಂಪಾದನೆ ಮಾಡು, ಅಂತ ಆಗ್ಬಿಟ್ಟಿದೆ.  

ಭರ್ತೃಹರಿ ಹೇಳ್ತಾನೆ - 

"ಯಸ್ಯಾಸ್ತಿ ವಿತ್ತಂ ಸ ನರಃ ಕುಲೀನಃ, ಸ ಪಂಡಿತಃ ಸ ಶ್ರುತವಾನ್ಗುಣಜ್ಞಃ ।  

ಸ ಏವ ವಕ್ತಾ ಸ ಚ ದರ್ಶನೀಯಃ  ಸರ್ವೇ ಗುಣಾಃ ಕಾಂಚನಂ ಆಶ್ರಯಂತಿ ।।" 

ಇಲ್ಲಿ ಭರ್ತೃಹರಿ ಒಂದು ರೀತಿಯಾಗಿ ಧನವನ್ನ ಪ್ರಶಂಸೆ ಮಾಡಿರೋದು, ಧನವಂತನನ್ನಲ್ಲ. ಆದ್ರೆ   ಆಗಿರೋದು ಏನು ಗೊತ್ತಾ.  

ಧನ ಪಿಪಾಸುಗಳು ಬೇರೆಲ್ಲಾ ಸುಭಾಷಿತ ಗಳಿಗಿಂತ  ಈ ಸುಭಾಷಿತವನ್ನ ಚೆನ್ನಾಗಿ ಅರ್ಥೈಸಿಕೊಂಡು,  ನಿಜವೇ ಅಂತ ಒಪ್ಕೊಂಡು ಆಹ್ವಾನಿಸಿಕೊಂಡು ಬಿಟ್ಟಿರ್ತಾರೆ. 

ಹಾಗಾಗಿ ಅವರ ಧನಾರ್ಜನೆ ಹೇಗೂ ಆಗಬಹುದು, ಯಾವುದೇ ಮಟ್ಟಕ್ಕೆ ಹೋಗಬಹುದು. ನಾವು ಕಷ್ಟಪಟ್ಟು ದುಡಿದು Tax ಕಟ್ತೀವಲ್ವಾ, ಅವ್ರು ಅದನ್ನೂ ತಪ್ಪಿಸ್ಕೊಳ್ತಾರೆ. ನಮ್ಗೆ ಉದ್ಯೋಗ ಕಟ್ಟಿಕೊಳ್ಳಲು Merit ಬೇಕು. ಆದ್ರೆ, ಅವರ demerit ಕೂಡಾ merit ಆಗ್ಬಿಡುತ್ತೆ.  

ಹೋಗ್ಲಿ, ಇವರುಗಳಾಗಲೀ, ಶ್ರೀಮಂತರು ದೊಡ್ಡ ದೊಡ್ಡ ಉದ್ಯೋಗಿಗಳು, ಸಿನೆಮಾ ನಟರು ತುಂಬಾ ತುಂಬ ಹಣಗಳಿಸಿದವರಲ್ಲಿ ಎಷ್ಟು ಜನ ಸುಖ ಶಾಂತಿಯಿಂದ ಬದುಕ್ತಿದಾರೆ?.  

ಸಂಪತ್ತನ್ನ ಗಳಿಸೋ  ಹಾದಿಯಲ್ಲಿ ಕ್ಲೇಶವುಂಟಾಗುತ್ತೆ, ಅದನ್ನು ಕಾಪಾಡೋ ಪ್ರಯತ್ನದಲ್ಲಿ ಅತಿಯಾದ ಒತ್ತಡಾನ ಅನುಭವಿಸ್ತಾರಲ್ವ.   ಕೆಲವರು depression ಗೆ ಒಳಗಾಗಿ ಆತ್ಮಹತ್ಯೆ ಮಾಡ್ಕೊಂಡಿರೋದನ್ನ ಓದ್ತಿರ್ತೀವಲ್ವಾ. ಇದು ಯಾಕೆ ಹೀಗೆ? ಧನ ಸಂಪಾದನೆಯ ನಿಟ್ಟಿನಲ್ಲಿ ಅರೋಗ್ಯನೂ ಕೈಕೊಡ್ತಾ, ಕುಂಠಿತಗೊಳ್ತಾ ಹೋಯ್ತು, ಸುಖ ಶಾಂತಿ ಅನ್ನೋದು ಇವ್ರಿಗೆ ಇಲ್ಲವಾಗಿ ಹೋಯ್ತು ಅಲ್ವಾ. 

ಹಾಗೆಯೇ ಭರ್ತೃಹರಿವೈರಾಗ್ಯಶತಕದಲ್ಲಿ ನಿತ್ಯಸಂತುಷ್ಟನಾದ ಒಬ್ಬ ವಿರಕ್ತನಾದವನು ರಾಜನಿಗೆ ಹೇಳುವ ಮಾತನ್ನ ನೋಡಿ:

वयमिह परितुष्टा वल्कलैस्त्वं दुकूलैः
सम इव परितोषो निर्विशेषो विशेषः ।
स तु भवतु दरिद्रो यस्य तृष्णा विशाला
मनसि च परितुष्टे कोऽर्थवान्को दरिद्रः ॥


ವಯಮಿಹ ಪರಿತುಷ್ಟಾಃ ವಲ್ಕಲೈಸ್ತ್ವಂ ದುಕೂಲೈಃ
ಸಮ ಇವ ಪರಿತೋಷೋ ನಿರ್ವಿಶೇಷೋ ವಿಶೇಷಃ |
ತು ಭವತು ದರಿದ್ರೋ ಯಸ್ಯ ತೃಷ್ಣಾ ವಿಶಾಲಾ
ಮನಸಿ ಚ ಪರಿತುಷ್ಟೇ ಕೋಽರ್ಥವಾನ್ ಕೋ ದರಿದ್ರಃ ||

"ಎಲೈ ರಾಜ, ನಾವು ನಾರು ಬಟ್ಟೆಗಳಿಂದ ಸಂತುಷ್ಟರಾಗಿದ್ದೇವೆ, ನೀನು ರೇಷ್ಮೆಯ ಬಟ್ಟೆಗಳಿಂದ ಸಂತುಷ್ಟನಾಗಿದ್ದೀಯೆ. ನಮ್ಮಿಬ್ಬರ ಸಂತೋಷವೂ ಒಂದೇ. ಇದರಲ್ಲಿ ವಿಶೇಷವಿಲ್ಲದ್ದೇ ಒಂದು ವಿಶೇಷ. ಮನಸ್ಸು ತೃಪ್ತವಾದಾಗ ಧನಿಕನಾರು? ದರಿದ್ರನಾರು?" 

ಇದರ ಕನ್ನಡ ತರ್ಜುಮೆ ಎಷ್ಟು ಚೆನ್ನಾಗಿದೆ ನೋಡಿ: ನಾರುಮಡಿ ಉಟ್ಟರೂ ನಮಗುಂಟು ತೃಪ್ತಿ ಸೊಗಸಾದ ಬಟ್ಟೆಬರೆ ಉಟ್ಟ ನಿಮ್ಮಷ್ಟೇ! | ಆಸೆ ಹೆಚ್ಚಿದವ ನಿಜದಿ ಬಡವ; ಇಲ್ಲದಿರೆ ಬಡವ ಧನಿಕರ ಭೇದ ಕಾಣುವುದೆ ಇಲ್ಲ | 

Meaning in English: "We are content to wear tree-barks for clothes, and you with rich dresses;
but the contentment is alike, and the difference is not significant. He whose desires are numerous is indeed poor. If contentment is in the mind, then who is rich or poor?
"

ಇದನ್ನ ಎಲ್ರೂ ಓದಿರ್ತೀವಿ...

ಒಬ್ಬ ಶ್ರೀಮಂತ, ಧನ ಸಂಪಾದನೆಯಲ್ಲಿ ಎಷ್ಟು ಮುಳುಗಿ ಹೋಗಿದ್ದ ಅಂದ್ರೆ, ಅವನ ಮುದ್ದಿನ ಮಗಳ ಜೊತೆ ಮಾತಾಡೋದಕ್ಕೂ ಸಮಯವಿರಲಿಲ್ಲವಂತೆ. ಒಂದಿನ, ಆ ಮಗು ತನ್ನಲ್ಲಿ ಒಟ್ಟುಗೂಡಿಸಿಕೊಂಡಿದ್ದ ಪುಡಿಕಾಸನ್ನೆಲ್ಲಾ ತಗೊಂಡ್ಹೋಗಿ ಅಪ್ಪನ ಮುಂದಿಟ್ಟು ನಂಗೂ ಸ್ವಲ್ಪ ಹೊತ್ತಿನ appointment ಕೊಡು, ನಾನೂ ನಿನ್ಹತ್ರ ಸ್ವಲ್ಪ ಮಾತಾಡ್ಬೇಕು ಅಂತ ಕೇಳ್ತಂತೆ. ಧನ ದಾಹ ಆ ಮಟ್ಟಕ್ಕೆ ಹೋಗ್ಬಾರ್ದಲ್ವಾ. 

ಜಾಗ್ರತ ಪಂಚಕಮ್ ನಲ್ಲಿ ಆದಿ ಶಂಕರಾಚಾರ್ಯರು ಹೀಗೂ ಎಚ್ಚರಿಸ್ತಾರೆ: 

क्षणं वित्तं क्षणं चित्तं क्षणं जीवितमावयोः।
यमस्य करुणा नास्ति तस्मात् जाग्रत जाग्रत॥

ಕ್ಷಣಂ ವಿತ್ತಂ, ಕ್ಷಣಂ ಚಿತ್ತಂ, ಕ್ಷಣಂ ಜೀವಿತಮೇವಚ| ಯಮಸ್ಯ ಕರುಣಾ ನಾಸ್ತಿ, ತಸ್ಮಾತ್ ಜಾಗ್ರತ ಜಾಗ್ರತ||

ವಿತ್ತ, ಚಿತ್ತ,  ಜೀವಿತ ಎಲ್ಲವೂ ಕ್ಷಣಿಕವೇ. ಯಮನಿಗೆ ದಯೆ ಎಂಬುದಿಲ್ಲ, ಆದ್ದರಿಂದ ಎಚ್ಚರ, ಎಚ್ಚರ!!

Meaning: Mind may change quickly; money / materialistic possessions may disappear instantly; Life may come to end by a split second. So, wake up and be attentive.

ಶಂಕರ ಭಗವತ್ಪಾದರು ಹೇಳಿರುವಂತೆ:

  • ಧನ ಸಂಪಾದನೆ ಜೀವನೋಪಾಯಕ್ಕೆ ಅವಶ್ಯ ಹೌದಾದರೂ, ಅದು ಮೋಹವಾಗಬಾರದು. ಎಲ್ಲವೂ ಮಿತಿಯಲ್ಲಿರಬೇಕು. 
  • ಅತಿಯಾದರೆ ನಮ್ಮ ಶಾಂತಿ, ನೆಮ್ಮದಿ ಕಳ್ಕೊಂಡು ಖಿನ್ನ ಮನಸ್ಕರಾಗ್ತೀವಿ.
  • ನಾವು ಮಾಡುವ ನಮ್ಮ ನಮ್ಮ ಉದ್ಯೋಗದಿಂದ, ಅಥವಾ ನ್ಯಾಯಯುತವಾಗಿ ಧರ್ಮದ ಚೌಕಟ್ಟಿನಲ್ಲಿ ಎಷ್ಟು ಬೇಕಾದರೂ ಸಂಪಾದಿಸಿ ನಮಗೆ ಎಷ್ಟು ದೊರೆಯುತ್ತದೆಯೋ ಅದು ಭಗವದನುಗ್ರಹವೆಂದು ಭಾವಿಸ್ತಾ, ತೃಪ್ತಿಯನ್ನು ಕಂಡ್ಕೊಳ್ಳಬಹುದಾಗಿದೆ. 
  • ಹಾಗೆಯೇ, ನಮ್ಮೆಲ್ಲಾ ಸಮಯವನ್ನು ಧನಾರ್ಜನೆಗೇ ವ್ಯಯಿಸದೆ, ಸ್ವಲ್ಪವಾದರೂ ಸಮಯವನ್ನ ಭಗವಂತನ ಧ್ಯಾನದ ಕಡೆಗೆ ಮೀಸಲಾಗಿಡ್ತಾ, ಅದರಿಂದ ಶಾಂತಿ, ನೆಮ್ಮದಿ ಕಂಡುಕೊಳ್ಳಬಹುದಾಗಿದೆ. 

    ಇದು ಶಂಕರ ಭಗವತ್ಪಾದರ ಹಿತೋಕ್ತಿ, ನಮಗೆ ಅನುಸರಣೀಯವೂ ಹೌದು. 

    ಓಂ ತತ್ಸತ್,

    "ಶೃತಿ ಸ್ಮೃತಿ ಪುರಾಣಾನಾಮಾಲಯಮ್ ಕರುಣಾಲಯಮ್ | ನಮಾಮಿ ಭಗವತ್ಪಾದ ಶಂಕರಮ್ ಲೋಕ ಶಂಕರಮ್" ||

     ನಾಣ್ನುಡಿ: ನಾವು ಯಾವುದನ್ನು ಹೊ೦ದಿಲ್ಲವೋ ಅದರ ಬಗ್ಗೆ ಚಿ೦ತಿಸುವುದನ್ನು ಬಿಟ್ಟು, ನಮ್ಮಲ್ಲಿ ಇರುವುದರ ಬಗ್ಗೆ ಹೆಮ್ಮೆ ಪಡುವುದು ಲೇಸು!

    Author: Respected Shri. RaamaMurthy

    Previous: BhajaGovindam Shloka # 1 Next: Coming Soon

    Leave a Reply

    Your email address will not be published. Required fields are marked *