ಹರಿಃ ಓಂ
ಶ್ರುತಿ ಸ್ಮೃತಿ ಪುರಾಣಾನಾಂ ಆಲಯಂ ಕರುಣಾಲಯಂ | ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಂ ||
श्रुति स्मृति पुराणानां आलयं करुणालयाम् | नमामि भगवत्पादं शंकरं लॊक शंकरम् ||
ಶ್ರೀ ಶಂಕರಾಚಾರ್ಯ ವಿರಚಿತ ಭಜ ಗೋವಿಂದಂ ಭಜ ಗೋವಿಂದಂ . . (ಮೋಹಮುದ್ಗರ).:
ಮೋಹಮುದ್ಗರ - ಇದರ ಹಿನ್ನೆಲೆ ಸ್ವಲ್ಪ ನೋಡೋದಾದ್ರೆ, ಶಂಕರಾಚಾರ್ಯರು ಕಾಶಿಯಲ್ಲಿ ಗಂಗಾ ಸ್ನಾನ ಮಾಡಿ, ವಿಶ್ವನಾಥನ ದರ್ಶನಕ್ಕೆ ಬರ್ತಿದ್ದಾಗ, ಒಬ್ಬ ವಯೋವೃದ್ಧರು, ವ್ಯಾಕರಣ ಶಾಸ್ತ್ರ ಓದ್ತಿದ್ದರಂತೆ. ಅದನ್ನು ನೋಡಿದಾಗ ಅವರಿಗೆ ಅನುಕಂಪ ಉಂಟಾಗಿ, ಈತ ತನ್ನ ಅಂತ್ಯಕಾಲ ಸಮೀಪಿಸುತ್ತಿರುವಾಗಲೂ, ಭಗವಂತನ ಸ್ಮರಣೆಗೆ ಹೆಚ್ಚು ಒತ್ತು ಕೊಡದೇ, ವ್ಯಾಕರಣ ಶಾಸ್ತ್ರ ಓದ್ತಿದಾನಲ್ಲಾ ಅನ್ನಿಸಿದಾಗ ಈ ಶ್ಲೋಕಗಳು ಸ್ಫುರಿಸಿದವು ಅಂತ ಹೇಳ್ತಾರೆ.
ನಂಗೆ ಇಲ್ಲಿ ಸ್ವಲ್ಪ-ಕಸಿ ವಿಸಿ ಅನ್ಸಕ್ಕೆ ಶುರುವಾಯ್ತು.
ವೃದ್ಧಾಪ್ಯದಲ್ಲಿ ವ್ಯಾಕರಣ ಶಾಸ್ತ್ರ ಓದ್ಬಾರದೇ ?, ಹಾಗೇನಿಲ್ಲ ನಮ್ಮ ವೃದ್ಧಾಪ್ಯದ ವೇಳೆಗೆ ನಮ್ಮ ಓದು, ವಿದ್ಯಾಭ್ಯಾಸ ಒಂದು ಘಟ್ಟ ತಲ್ಪಿರುತ್ತೆ, ಮನನ ಮಾತ್ರ ಮಾಡ್ತಾ, ಭಗವಂತನ ಸ್ಮರಣೆಗೆ ಹೆಚ್ಚಿನ ಆದ್ಯತೆ ಕೊಡ್ಬೇಕು ಅನ್ನೋ ಉದ್ದೇಶ ಆದಿ ಶಂಕರಾಚಾರ್ಯರದ್ದಾಗಿರಬಹುದು ಅಂತಾನೂ ಸಮಾಧಾನ ಪಟ್ಕೊಂಡೆ.
ನಂಗೆ ಹಂಗೆ ಅನ್ಸಿದ್ರೂ, ನಂಗೆ ಅಂತಲ್ಲಾ ಎಲ್ರಿಗೂ "ಜ್ಞಾನಿಗಳಾದ, ಶ್ರೀ ಶಂಕರಾಚಾರ್ಯರು", ವೃದ್ಧಾಪ್ಯದಲ್ಲಿ ವ್ಯಾಕರಣ ಶಾಸ್ತ್ರ ಓದ್ಬಾರದು ಅಂತ ಹೇಳಿರುವ ಸಾಧ್ಯತೆ ಇದೆಯೇ? ಅನ್ನಿಸಬಹುದಲ್ವಾ, ನಂಗೂ ಹಾಗೇ ಅನ್ಸಕ್ಕೆ ಶುರುವಾಯ್ತು.
ವ್ಯಾಕರಣ ವನ್ನಾಗಲೀ, ಯಾವುದೇ ಶಾಸ್ತ್ರ, ಭಗವದ್ಗೀತೆ, ಉಪನಿಷದ್ಗಳು, ಬ್ರಹ್ಮಸೂತ್ರ ಇತ್ಯಾದಿಗಳನ್ನ ತಿಳಿಯಲು, ಅಭ್ಯಸಿಸಲು ವಯಸ್ಸಿನ ಕಟ್ಟುಪಾಡು ಹಾಕಿಕೊಳ್ಳಲು ಆಗುತ್ಯೇ?. ಖಂಡಿತಾ ಇಲ್ಲ ಆಲ್ವಾ.
ಸ್ವಲ್ಪ ಅಂತರ್ಜಾಲಗಳಲ್ಲೂ, ಕೆಲವು ಪುಸ್ತಕಗಳನ್ನೂ ತಡಕಾಡಿದೆ. ಸ್ವಲ್ಪ ಸಮಾಧಾನಕರವಾದ ಸುಳಿವು ತಿಳಿವು ಸಿಕ್ತು.
ದರ್ಶನಕಾರರು, ವಿಮರ್ಶಕರು, ಸಂಶೋಧಕರು ಹೇಳುವಂತೆ ಅದನ್ನೂ ಗಮನಿಸೋದಾದ್ರೆ ಅದು ಬೇರೆಯೇ ಆಗಿದೆ.
ನಮಗೆ ಅದು ಇಷ್ಟವಾಗದಿದ್ರೂ, ಗಮನಾರ್ಹವಾಗಿದೆ ಅನ್ಸುತ್ತೆ.
ಮುಖ್ಯವಾಗಿ ಸ್ವಯಂಪ್ರಕಾಶ ಸ್ವಾಮಿನ್ ಅವರ ಪ್ರಕಾರ, ಹಾಗೂ ಪ್ರತಿಪಾದನೆ (Govt Oriental Library, Chennai, ನಲ್ಲಿರುವ ಹಸ್ತಪ್ರತಿ/ತಾಳೇಗರಿ ಪ್ರಕಾರ), ನಾವು ಪಲ್ಲವಿ ಯಾಗಿ ಹೇಳುವ ಭಜ ಗೋವಿಂದಂ ಭಜ ಗೋವಿಂದಂ . . ಮೂಲಪ್ರತಿಯಲ್ಲಿ ಇರುವುದಿಲ್ಲವಾಗಿಯೂ, ಅಲ್ದೇ, ವೃದ್ಧನ ಬಗ್ಗೆ ಯಾಗಲೀ, ವ್ಯಾಕರಣದ ಬಗ್ಗೆ ಯಾಗಲೀ, ಉಲ್ಲೇಖವೇ ಇಲ್ಲವಂತೆ. ಇದನ್ನು ಓದಿದಾಗ ಸ್ವಲ್ಪ ಸಮಾಧಾನವಾಯ್ತು
ಹೀಗಿರುವಾಗ, ವೃದ್ಧಾಪ್ಯದಲ್ಲಿ ವ್ಯಾಕರಣ ಶಾಸ್ತ್ರ ಓದ್ಬಾರದು ಅಂತ ಜ್ಞಾನಿಗಳಾದ, ಶ್ರೀ ಶಂಕರಾಚಾರ್ಯರು ಹೇಳಿರುವ ಸಾಧ್ಯತೆಯೇ ಇಲ್ಲ, ಹಾಗಾಗಿ ವಯೋಮಾನ ಯಾವುದೇ ಶಾಸ್ತ್ರವನ್ನಾಗಲೀ, ವ್ಯಾಕರಣ ಶಾಸ್ತ್ರವೇ ಆಗಲಿ ಅಧ್ಯಯನ ಮಾಡಬಾರದು ಅಂತ ಹೇಳಿರುವ ಸಾಧ್ಯತೆ ಇಲ್ಲ ಅಂತ ಅನ್ಕೋಬಹುದು.
ಈ ಶ್ಲೋಕವನ್ನ ನಂತರದಲ್ಲಿ, ಭಕ್ತಾದಿಗಳೋ, ದಾರ್ಶನಿಕರೋ ಸೇರಿಸಿರಬಹುದಾಗಿದೆ.
ಇಲ್ಲಿ, ನಾವು ಗಮನಿಸಬಹುದಾದ ಮತ್ತೊಂದು ಅಂಶ ಅಂದ್ರೆ, 1200 ವರ್ಷಗಳ ಹಿಂದೆ, ಶ್ರೀ ಶಂಕರಾಚಾರ್ಯರು ರಚಿಸಿದ ಕಾಲದಲ್ಲಿ ದಾಖಲಾತಿಗೆ (Documentation) ಅಷ್ಟಾಗಿ ಪ್ರಾಮುಖ್ಯತೆ ಇರಲಿಲ್ಲವಾಗಿ, ಇರಲಿಲ್ಲ ಅನ್ನೋದಕ್ಕಿಂತ ಈಗಿನ ಹಾಗೆ paper, pen ಇರಲೇ ಇಲ್ವಲ್ಲ, ಅವರಿಗೆ ಅದು ಅವಶ್ಯಕತೆಯೂ ಅಗಿರ್ಲಿಲ್ವೇನೋ, ತಾಳೇಗರಿಯಲ್ಲಿ ಒಂದೋ ಎರಡೋ ಪ್ರತಿ ಮಾಡಿಟ್ಕೊಂಡ್ರೆ ಅದೇ ಅವ್ರಿಗೆ ಸಾಕಾಗಿರ್ತಿತ್ತು, ಬರೀ ಕಂಠಸ್ತ ಪದ್ಧತಿಯೇ ಪ್ರಚಲಿತವಿತ್ತಾಗಿ, ಆಗಿನ ಗುರುಪರಂಪರೆಯಲ್ಲಿ, ಶಿಷ್ಯರಿಗೆ ಬೋಧಿಸುವ ಸಮಯದಲ್ಲಿ ಗುರುಗಳು ಅಲ್ಪಸ್ವಲ್ಪ ಬದಲಾವಣೆ ಯೊಂದಿಗೆ, ಅಲ್ಪಸ್ವಲ್ಪ ಸೇರ್ಪಡೆಯಾಗಿದ್ದಲ್ಲಿ ಆಶ್ಚರ್ಯಪಡ ಬೇಕಾದ್ದಿಲ್ಲ ಅಲ್ವಾ.
ಮಹಾಭಾರತದ ಕರ್ಣನ, ದುರ್ಯೋಧನನ ಪಾತ್ರಗಳನ್ನ ಹಲವರು 'ನಾಯಕನ ಪಾತ್ರದಂತೆ' ಪ್ರತಿಬಿಂಬಿಸಿರುವುದನ್ನೂ, ಪ್ರತಿನಿಧಿಸಿರುವುದನ್ನೂ ನಾವು ಓದಿರ್ತೀವಲ್ವಾ, ಇದೂ ಹಾಗೇ ಆಗಿರಬಹುದು. ಅವರವರ ಭಾವಕ್ಕೆ ಅರ್ಥವಿವರಣೆ ಕೊಡ್ತಾ ಹೋಗ್ತಾರೆ.
ಇರಲಿ, "ನಮಗೆ ಇಷ್ಟವಾಗದಿದ್ರೂ" ಅಂತ ಹೇಳ್ದೆ ಆಲ್ವಾ, ಯಾಕಂದ್ರೆ, ನೀವೇ ನೋಡಿ - ಪಲ್ಲವಿ ಯಾಗಿ ಹೇಳುವ ಭಜ ಗೋವಿಂದಂ ಭಜ ಗೋವಿಂದಂ . . ಅನ್ನು ಬಿಟ್ಟು ಬೇರೆ ಶ್ಲೋಕ ಗಳನ್ನು ಮಾತ್ರ ಹೇಳಿಕೊಳ್ಳಲು ಸಾಧ್ಯವಾಗುತ್ತಾ ಅಂತ. ಸಾಧ್ಯವೇ ಇಲ್ಲ ಅನ್ಸುತ್ತೆ, ನಾವು ಅದಕ್ಕೆ ಎಷ್ಟು ಹೊಂದ್ಕೊಂಡು ಬಿಟ್ಟಿದೀವಿ ಅಂದ್ರೆ, "ಮೋಹ ಮುದ್ಗರ" ಅನ್ನೋದಕ್ಕಿಂತ " *ಭಜ ಗೋವಿಂದಂ ಭಜ ಗೋವಿಂದಂ . .* " ಅಂತಾನೇ ಹೇಳುವುದು ಪ್ರಸ್ತುತ ವಾಗಿ ಬಿಟ್ಟಿದೆ ಆಲ್ವಾ.
ಹಾಗಾಗಿ, ತರ್ಕ ವಿತರ್ಕ ಅದೆಲ್ಲಾ ಏನೇ ಇರ್ಲಿ, ನಂಗೆ ಅನ್ಸೋದು, ಈಗಿರವಂತೆಯೇ ಅದಕ್ಕೆ ನಾವು ಹೊಂದಿಕೊಂಡಿರುವಂತೆಯೇ ಅದರಲ್ಲಿನ ತತ್ವಗಳನ್ನ ಪ್ರಧಾನವಾಗಿಟ್ಕೊಂಡು, ಬಾಕಿ ಎಲ್ಲಾ ವಿಷಯಗಳನ್ನ ದರ್ಶನಕಾರರು, ವಿಮರ್ಶಕರು, ಚಾರಿತ್ರಿಕರು, ಸಂಶೋಧಕರು ಗಳಿಗೇ ಬಿಟ್ಬಿಡೋಣ, ಮುಂದೆ ಸಾಗೋಣ, ಅದೇ ಸೂಕ್ತ ಅನ್ಸುತ್ತೆ.
ಇಲ್ಲಿ ನಾವು ನೋಡ್ಬೇಕಾಗಿರೋದು ನಂಗೆ ಅನ್ನಿಸಿದಹಾಗೆ, “ಭಜಗೋವಿಂದಂ. . . (ಮೋಹಮುದ್ಗರ)" - ಇದರಲ್ಲಿನ ಶ್ಲೋಕ ಗಳಲ್ಲಿ ಮುಖ್ಯವಾಗಿ ನಮ್ಮಲ್ಲಿರುವ ಅತಿಯಾದ ಆಸೆ, ಅತಿಯಾದ ಮೋಹ ಒಳ್ಳೆಯದಲ್ಲ, ಇವುಗಳನ್ನು ಕಡಿಮೆ ಮಾಡಿಕೊಳ್ತಾ ಹೋಗಬೇಕು ಅನ್ನೋ ಸಂದೇಶ ಇದೆ. ಇದನ್ನ ಸ್ವಲ್ಪ ಕಠಿಣವಾಗೇ ಶ್ರೀ ಶಂಕರಾಚಾರ್ಯರು ಹೇಳಿದಾರೇನೋ ಅಂತ ಕೆಲವು ವ್ಯಾಖ್ಯಾನಕಾರರು ಹೇಳುವುದೂ ಇದೆ. ಮೋಹವನ್ನು ಸುತ್ತಿಗೆಯಲ್ಲಿ ಹೊಡೆದಂತೆ (hammering) ಹೊಡಿದೋಡಿಸು ಅನ್ನೋ ರೀತಿ ಹೇಳಿದಾರೆ ಅಂತ "ಮೋಹಮುದ್ಗರ" ಅಂತಲೂ ಇದನ್ನು ಕರೆಯಲಾಗಿದೆ ಅಂತಲೂ ಹೇಳ್ತಾರಾದ್ರೂ, ಎಲ್ಲಾ ಶ್ಲೋಕಗಳೂ ನಾವು ಬದುಕುವ ರೀತಿಗೆ ಕನ್ನಡಿ ಹಿಡ್ದು ತೋರಿಸುವಂತಿದೆ ಅನ್ನೋದಂತೂ ಖಂಡಿತ.
ಶ್ರೀ ಶಂಕರಾಚಾರ್ಯರು ಎಲ್ಲೂ ಯಾವುದನ್ನೂ ಬೇಡ ಅನ್ನೋದಿಲ್ಲ. ಎಲ್ಲವೂ ಮಿತಿಯಲ್ಲಿರಬೇಕು. ಯಾವುದರಲ್ಲೂ ಅತಿಯಾದರೆ ನಮ್ಮ ಶಾಂತಿ, ನೆಮ್ಮದಿ ಕಳ್ಕೊಂಡು ಖಿನ್ನ ಮನಸ್ಕರಾಗ್ತೀವಿ ಅನ್ನೋದೇ ಆಗಿದೆ. ನಮ್ಮೆಲ್ಲಾ ಸಮಯವನ್ನು ಧನಾರ್ಜನೆಗೇ ವ್ಯಯಿಸದೆ, ಸ್ವಲ್ಪವಾದರೂ ಸಮಯವನ್ನ ಭಗವಂತನ ಧ್ಯಾನದ ಕಡೆಗೆ ಮೀಸಲಾಗಿಡಬೇಕೆಂಬುದು, ಅದರಿಂದ ಶಾಂತಿ, ನೆಮ್ಮದಿ ಕಂಡುಕೊಳ್ಳಬಹುದು ಅನ್ನೋದೇ ಆಗಿದೆ ಅಂತ ಅನ್ಕೋಬಹುದು ಅನ್ಸುತ್ತೆ.
ಅವರ ಅರ್ಥದಲ್ಲಿ, ಪ್ರಾಪಂಚಿಕ ಸಂಪತ್ತೆಲ್ಲವೂ ನಶಿಸಿಹೋಗಬಹುದಾದದ್ದು, ಭಗವದ್ಚಿಂತನೆ, ಧ್ಯಾನಾದಿಗಳು ಶಾಂತಿ ನೆಮ್ಮದಿಯನ್ನು ಕೊಡುವಂಥದ್ದು.
ಹಾಗೆಯೇ ನಮ್ಮಲ್ಲಿ, ಪಠಣ ಕ್ರಮ ಹೇಗಿದೆ ಅಂತ ನೋಡೋದಾದ್ರೆ, ಸ್ವಲ್ಪದರಲ್ಲಿ ಹೇಳ್ಬೇಕು ಅಂದ್ರೆ - ಭಜಗೋವಿಂದಂ ಸ್ತೋತ್ರದಲ್ಲಿ ಮೊದಲನೇ ಶ್ಲೋಕವನ್ನು ಪಲ್ಲವಿ ಎಂದು ಪರಿಗಣಿಸ್ತಾ ಪ್ರತೀ ಶ್ಲೋಕದ ನಂತರ ಹೇಳುವ ಪರಿಪಾಠವೇ ಆಗಿ ಬಂದಿದೆ.
ನೆನ್ನೆ, ನಾನು ದೇವಸ್ಥಾನದಲ್ಲಿ ನೋಡಿದಾಗ, ಅವರು ಅನುಸರಿಸಿದ ರೀತಿಯೂ ಅದೇ ಆಗಿತ್ತು. ಒಂದು ಶ್ಲೋಕವನ್ನು ಹೇಳಿದನಂತರ, ಉಳಿದವರು ಎಲ್ಲರೂ ಒಂದಾಗಿ ಪಲ್ಲವಿಯನ್ನು ಪುನರಾವರ್ತಿತವಾಗಿ ಹೇಳ್ತಿದ್ರು.
ಭಜಗೋವಿಂದಂ ಸ್ತೋತ್ರದಲ್ಲಿ ಮೊದಲನೇ ಶ್ಲೋಕವನ್ನು ಪಲ್ಲವಿ ಎಂದು ಪರಿಗಣಿಸ್ತಾರೆ ಅಂತ ಹೇಳ್ದೆ ಆಲ್ವಾ, ನಂತರದ ಹನ್ನೆರಡು ಶ್ಲೋಕಗಳನ್ನು ಶಂಕರಾಚಾರ್ಯರೇ ರಚಿಸಿರುವರೆಂದೂ ಇದನ್ನು "ದ್ವಾದಶ ಮಂಜರಿಕಾ ಸ್ತೋತ್ರ" ವೆಂದು ಹೇಳಲಾಗಿದೆ.
ನಂತರದಲ್ಲಿ, ಅವರೊಡನಿದ್ದ ಹದಿನಾಲ್ಕು ಶಿಷ್ಯರೂ *ದ್ವಾದಶ ಮಂಜರಿಕಾ ಸ್ತೋತ್ರ* ದಿಂದ ಸ್ಫೂರ್ತಿ ಗೊಂಡು ಪ್ರತಿಯೊಬ್ಬರೂ ಇದಕ್ಕೆ ಪೂರಕವೋ ಎಂಬಂತೆ ಒಂದೊಂದು ಶ್ಲೋಕಗಳನ್ನು ರಚಿಸಿ ಧನ್ಯರಾಗಿದ್ದಾರೆ. ಇದು *"ಚತುರ್ದಶಾ ಮಂಜರಿಕಾ ಸ್ತೋತ್ರಮ್"* ಎಂದೇ ಪ್ರಸಿದ್ಧಿ.
ಇದರಿಂದ ಸುಪ್ರಸನ್ನರಾದ ಆಚಾರ್ಯರು ಮತ್ತೂ ನಾಲ್ಕು ಶ್ಲೋಕಗಳನ್ನು ರಚಿಸಿ ಶಿಷ್ಯರನ್ನು ಹಾಗೂ ನಮ್ಮನ್ನು ಆಶೀರ್ವದಿಸಿದ್ದಾರೆ. ಹೀಗಾಗಿ ಭಜಗೋವಿಂದಂ 31 ಶ್ಲೋಕಗಳನ್ನೊಳಗೊಂಡ ಆಧ್ಯಾತ್ಮಿಕ ರತ್ನ ಭಂಡಾರವೆನಿಸಿಕೊಂಡಿದೆ.
ಇದರೊಂದಿಗೆ ಸ್ತೋತ್ರಮಂಜರಿಯಲ್ಲಿ ಇಲ್ದೇ ಇದ್ರೂ, ಮತ್ತೆರಡು ಶ್ಲೋಕಗಳನ್ನ ಸಮಾರೋಪ ಶ್ಲೋಕವಾಗಿ ಹೇಳಿಕೊಳ್ಳುವುದೂ ಇದೆ. (ಇದು ಯಾರ ರಚನೆ ಅನ್ನೋದು ಗೊತ್ತಿಲ್ಲವಾಗಿ ಹೇಳ್ತಾರಾದ್ರೂ ಚೆನ್ನಾಗಂತೂ ಇದೆ, ಭಾವಪೂರ್ವಕ ಇದನ್ನೂ ಸೇರಿಸಿ ಹೇಳಿಕೊಳ್ಳಬಹುದಾಗಿದೆ).
ನಾವೂ ಕೂಡ ಶ್ರೀ ಶಂಕರ ಭಗವದ್ಪಾದರ ಅನುಜ್ಞೆಯಂತೆ "ಸೋಹಮ್" ಭಾವದ ಕಡೆ ಸಾಗುವ ಪ್ರಯತ್ನವನ್ನು ಹಾಕೋಣ, ಸಾಧ್ಯವಾದಾಗಲೆಲ್ಲಾ ಒಂದೊಂದೇ ಶ್ಲೋಕಗಳ ಅರ್ಥಗ್ರಹಣೆಗೆ, ವಾಸ್ತವಿಕತೆಯ ಬಗ್ಗೆ ಗಮನ ಹರಿಸೋಣ.
ಶ್ರೀ ಶ್ರೀ ಜಗದ್ಗುರು ಆದಿ ಶಂಕರಾಚಾರ್ಯರ ಅನುಗ್ರಹ ನಮ್ಮ ಮೇಲಿರಲಿ, ಎಲ್ಲರಿಗೂ ದೊರೆಯುವಂತಾಗಲಿ ಎಂದು ಆಶಿಸ್ತಾ -
ಓಂ ತತ್ಸತ್
"ಶೃತಿ ಸ್ಮೃತಿ ಪುರಾಣಾನಾಮಾಲಯಮ್ ಕರುಣಾಲಯಮ್ | ನಮಾಮಿ ಭಗವತ್ಪಾದ ಶಂಕರಮ್ ಲೋಕ ಶಂಕರಮ್" ||
Author: Respected Shri. RaamaMurthy