Shevadhi The Treasure https://shevadhi.com Shevadhi a Treasure trove Sun, 22 Dec 2024 07:14:52 +0000 en-US hourly 1 https://wordpress.org/?v=6.7.1 https://shevadhi.com/wp-content/uploads/2024/12/cropped-Shevadhi_Logo-32x32.jpg Shevadhi The Treasure https://shevadhi.com 32 32 BhajaGovindam Shloka # 1 https://shevadhi.com/2024/12/22/bhajagovindam-shloka-1/ https://shevadhi.com/2024/12/22/bhajagovindam-shloka-1/#respond Sun, 22 Dec 2024 03:51:20 +0000 https://shevadhi.com/?p=144 ಹರಿಃ ಓಂ

ಶ್ರುತಿ ಸ್ಮೃತಿ ಪುರಾಣಾನಾಂ ಆಲಯಂ ಕರುಣಾಲಯಂ |  ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಂ ||

श्रुति स्मृति पुराणानां आलयं करुणालयाम् | नमामि भगवत्पादं शंकरं लॊक शंकरम् ||

ಮೊದಲನೇ ಶ್ಲೋಕ ಭಜ ಗೋವಿಂದಂ ಭಜ ಗೋವಿಂದಂ. . .  ಬಗ್ಗೆ, ನೆನ್ನೆ ಸ್ವಲ್ಪ ನನ್ನ ಸೀಮಿತದಲ್ಲಿ ನನ್ನ ಅನಿಸಿಕೆ ಹೇಳಿದೀನಿ. ಇದನ್ನ ಪಲ್ಲವಿಯಾಗಿ ಅದನ್ನು ಶ್ರೀ ಶಂಕರಾಚಾರ್ಯ ವಿರಚಿತವೆಂದೇ ಭಾವಪೂರ್ವಕ ಎಲ್ಲರೂ ಹೇಳಿಕೊಳ್ತೇವೆ. ವೃದ್ಧಾಪ್ಯದಲ್ಲಿ  ವ್ಯಾಕರಣ ಶಾಸ್ತ್ರ ಓದ್ಬಾರದು, ಓದ್ಬಾರದೆ ಅನ್ನೋ ಜಿಜ್ಞಾಸೆ ಯನ್ನ ನೆನ್ನೆ ಹೇಳಿದಂತೆ 

ಬದಿಗಿಟ್ಬಿಡೋಣ. ತತ್ವಾರ್ಥ, ಸ್ಥೂಲಾರ್ಥ, ಅರ್ಥಗ್ರಹಣೆಗೆ, ವಾಸ್ತವಿಕತೆಯಕಡೆಗೆ ಗಮನ ಹರಿಸೋಣ. 

ಶ್ಲೋಕ 1:

भज गोविन्दं भज गोविन्दं गोविन्दं भज मूढमते |
सम्प्राप्ते सन्निहिते काले नहि नहि रक्षति डुक्रिङ्करणे ‖ 1 ‖

ಭಜ ಗೋವಿಂದಂ ಭಜ ಗೋವಿಂದಂ ಗೋವಿಂದಂ ಭಜ ಮೂಢಮತೇ|   
ಸಂಪ್ರಾಪ್ತೇ ಸನ್ನಿಹಿತೇ ಕಾಲೇ ನಹಿ ನಹಿ ರಕ್ಷತಿ  ಢುಕ್ರಿಞಕರಣೇ || 1||

ನೆನೆ ಗೋವಿಂದನ ನೆನೆ ಗೋವಿಂದನ, ಗೋವಿಂದನ ನೆನೆ ಮೂಢಮತಿ... ಮೃತ್ಯುವು ತಾ ಬಂದೆರಗುವ ಸಮಯದಿ ಡುಕೃಙ್ಕರಣವು ರಕ್ಷಿಸದು. (ನಾನು ಓದಿದ್ದ  ಒಂದು ಅನುವಾದ). 

"Worship Govinda, worship Govinda, worship Govinda, O fool! The rules of grammar will not save you at the time of your death."

ಸ್ಥೂಲಾರ್ಥ:

ಗೋವಿಂದನನ್ನು ಭಜಿಸು, ಗೋವಿಂದನನ್ನು ಭಜಿಸು, ಎಲೈ ಮೂಢ..! (ಇಲ್ಲಿ ಮೂಢ ಅಂದ್ರೆ ಅಜ್ಞಾನದಲ್ಲಿ ಮುಳುಗಿದ ಅಂತ ಅನ್ಕೋಬಹುದು ) ಅಂತ್ಯ ಕಾಲವು ಸಮೀಪಿಸಿರುವಾಗ, ವ್ಯಾಕರಣ ಶಾಸ್ತ್ರಾಭ್ಯಾಸ ( ಢುಕ್ರಿಞಕರಣೇ ) ನಿನ್ನನ್ನ ರಕ್ಷಿಸುವುದಿಲ್ಲ.

ಇಲ್ಲಿ ಹೇಳಿರುವ ' ಢುಕ್ರಿಞಕರಣೇ' ಶಬ್ದ ಪಾಣಿನಿಯ ಅಷ್ಟಾಧ್ಯಾಯಿ ಗ್ರಂಥದ ವ್ಯಾಕರಣ ಸೂತ್ರದಿಂದ ಆಯ್ದುಕೊಂಡಿರುವುದಾಗಿಯೂ, ಈ  ವ್ಯಾಕರಣ ನಿಯಮವು ಕೇವಲ ಲೌಕಿಕ ಜ್ಞಾನ ಮತ್ತು ಅವನ್ನು ಪಡೆಯುವ ಬಗೆಗೆ ಮಾತ್ರ ಸೀಮಿತವಾಗಿದ್ದು, ನಹಿ ನಹಿ ರಕ್ಷತಿ ಡುಕೃಙ್ಕರಣೆ  ಅಂದ್ರೆ,-  ಮೃತ್ಯುವು ಸೆಳೆದೊಯ್ಯುವಾಗ  ಈ  ವ್ಯಾಕರಣಸೂತ್ರ ಸಾವಿನ ದವಡೆಯಿಂದ ಪಾರುಮಾಡುವುದಿಲ್ಲ ಅಂತ ಅರ್ಥೈಸ್ತಾರೆ. ತತ್ಸಂಬಂಧ, ತನ್ನ ಇಳೀ ವಯಸ್ಸಿನಲ್ಲಿ ಈ ವೃದ್ಧ, ವ್ಯಾಕರಣ ಶಾಸ್ತ್ರಾಭ್ಯಾಸದ ಬದಲು, ಮೋಕ್ಷದಾಯಕವಾದ ಭಗವದ್ಸ್ಮರಣೆ, ಧ್ಯಾನದಲ್ಲಿ ತೊಡಗಿಸಿಕೊಳ್ಳಬಾರದೇ ಅನ್ನಿಸಿರಬಹುದು ಮತ್ತು ಮೂಢ ಎಂದು ಕರೆದಿರಬಹುದು ಅಂತ ಹೇಳ್ತಾರೆ. 

ನಮ್ಮಲ್ಲಿನ ಆಧ್ಯಾತ್ಮಿಕ ಚಿಂತನೆಯಲ್ಲಿ ಒಂದು ನಂಬಿಕೆ ಇದೆ. ಅಂತ್ಯ ಕಾಲ (ಭಗವದ್ಗೀತೆಯಲ್ಲಿ ಇದನ್ನ ಎಷ್ಟು ಚೆನ್ನಾಗಿ ಪ್ರಯಾಣ ಕಾಲೇ ಅಂತ ಹೇಳಿದೆ ಅಲ್ವಾ - ಅಧ್ಯಾಯ 8, ಅಕ್ಷರಬ್ರಹ್ಮಯೋಗ) ಸಮೀಪಿಸಿದಾಗ, ಏನನ್ನು ಸ್ಮರಣೆ ಮಾಡ್ತಿರ್ತೀವೋ, ಮುಂದಿನ ಜನ್ಮದಲ್ಲಿ ಅದನ್ನೇ ಪಡೀತೀವಿ ಅಂತ. 

ಅಂತ್ಯ ಕಾಲದಲ್ಲಿ ಬರುವ ಚಿಂತನೆ ಮುಂದಿನ ಜನ್ಮದ ನಿರ್ಣಾಯಕ ಸಂಗತಿ, ಹಾಗೆಯೇ ಮುಂದಿನ ಜನ್ಮದಲ್ಲಿ  ಏನಾಗಬೇಕೋ ಅದೇ ನೆನಪಾಗುತ್ತದೆ! ಅಂತ ಒಂದು ಹೇಳಿಕೆ ಇದೆ.  

ಇದನ್ನ ಭಗವದ್ಗೀತೆಯ 8ನೇ ಅಧ್ಯಾಯ, "ಅಕ್ಷರಬ್ರಹ್ಮಯೋಗ" ದಲ್ಲಿ ಚೆನ್ನಾಗಿ ವಿವರಿಸಿದೆ ಆಲ್ವಾ. 

ಶ್ರೀ ಶಂಕರಾಚಾರ್ಯ ಭಗವದ್ಪಾದರು ಭಗವದ್ಗೀತೆಗೂ  ಭಾಷ್ಯ ಬರೆದಿರುವುದು ಗೊತ್ತೇ ಇದೆ. ಅದರ ಒಂದು ಭಾಗದ ಸ್ಫುರಣೆ ಇದು ಅಂತಲೂ ಅನ್ಕೋಬಹುದು. ಇದನ್ನ ಓದ್ತಾ, ಭಗವದ್ಗೀತೆಯ ಅಧ್ಯಾಯ 8 ಶ್ಲೋಕ 5, 6 ನ್ನು  ಜ್ಞಾಪಿಸಿಕೊಳ್ಳಬಹುದಾಗಿದೆ. 

ಅಂತಕಾಲೇ ಚ ಮಾಮೇವ ಸ್ಮರನ್ . . . ಶ್ಲೋಕ 5,  ಯಂ ಯಂ ವಾSಪಿ ಸ್ಮರನ್ ಭಾವಂ ತ್ಯಜತ್ಯಂತೇ . . . ಶ್ಲೋಕ 6:

अन्तकाले च मामेव स्मरन्मुक्त्वा कलेवरम् |
य: प्रयाति स मद्भावं याति नास्त्यत्र संशय: || भगवद्गीता 8.5 ||

यं यं वापि स्मरन्भावं त्यजत्यन्ते कलेवरम् |
तं तमेवैति कौन्तेय सदा तद्भावभावित: || भगवद्गीता
8.6 ||

ನಂಗೆ ಇದು ಈ ಶ್ಲೋಕಕ್ಕೆ ಪೂರಕವಾಗಿದೆ ಅನ್ಸುತ್ತೆ. 

ಹಾಗೇ, ಇದಕ್ಕೆ ಪೂರಕವಾದ ಭರತನ ಒಂದು ಕಥೆ ಜ್ಞಾಪಕಕ್ಕೆ ಬರುತ್ತೆ. ಕಥೆ ಎಲ್ರಿಗೂ ಗೊತ್ತಿರಬಹುದು. 

ಇದು, ವೃಷಭದೇವನ ಮಗ ಭರತನ ಕಥೆ (ಈ ಭರತ ‘ಭರತವಂಶ’ ದ ಮೂಲ ಪುರುಷ ಭರತನಲ್ಲ; ಜಡ ಭರತ ಎಂದೇ ಪ್ರಸಿದ್ಧಿ). ಈತ, ಪರಮ ಧಾರ್ಮಿಕ.  ತನ್ನ ಮಗ ಪ್ರಾಯ ಪ್ರಬುದ್ಧನಾದ ಮೇಲೆ ತನ್ನೆಲ್ಲಾ ರಾಜ್ಯಾಧಿಕಾರವನ್ನು ಅವನಿಗೊಪ್ಪಿಸಿ, ವಾನಪ್ರಸ್ಥಾಶ್ರಮವನ್ನು ಸ್ವೀಕರಿಸಿ ಕಾಡಿನಲ್ಲಿ ಋಷಿಗಳ ಜೊತೆಗೆ ಸದಾ ಭಗವದ್ ಚಿಂತನೆಯಲ್ಲಿ ಬದುಕುತ್ತಿದ್ದವ.  ಒಂದಿನ ಅವ್ನಿಗೆ ಕಾಡಿನಲ್ಲಿ ತಾಯಿ ಸತ್ತ ಒಂದು ಜಿಂಕೆ ಮರಿ ಸಿಕ್ಬಿಡುತ್ತೆ. ಆ ಮರಿಯನ್ನು ತಂದು ಪಾಲನೆ ಪೋಷಣೆ ಮಾಡಕ್ಕೆ ಶುರು ಮಾಡ್ತಾನೆ.  ಅದೇನೋ ಒಳ್ಳೇದೆ. ಆದ್ರೆ ಮುಂದೇನಾಯ್ತು ಅಂದ್ರೆ, ಅವ್ನು ಸದಾ ಆ ಜಿಂಕೆಯನ್ನೇ ಪೋಷಣೆ ಮಾಡೋದ್ರಲ್ಲಿ, ಅದರ ಆಟ ನೋಟದಲ್ಲಿ ತನ್ನ ಸಮಯವನ್ನೆಲ್ಲಾ ಕಳೆಯಲಾರಂಭಿಸಿದ. ಇದರಿಂದ ಏನಾಯ್ತು, ಅವ್ನ ಸಾಧನೆ ಕುಂಠಿತವಾಗ್ತಾ ಹೋಯ್ತು, ಸಾಧನೆಗೆ ಚ್ಯುತಿ ಬಂತು. ಅವ್ನ ಆಯಸ್ಸೂ ಮುಗಿತಾ, ಆ ಜಿಂಕೆಯ ಮರಿ ಬೆಳೆದು ದೊಡ್ದಾಗುವ ಮೊದಲೇ ಆತ ಪ್ರಾಣತ್ಯಾಗ ಮಾಡುವ ಪ್ರಸಂಗ ಬಂತು. ಆ ಕಾಲದಲ್ಲಿ ಭರತನಿಗೆ ಕಾಡಿದ್ದು ಭಗವಂತನ ಚಿಂತನೆಯ ಬದಲು ಕಾಡಿದ್ದು ಆ ಜಿಂಕೆ ಮರಿಯ ಚಿಂತೆ!  ಹಾಗಾಗಿ, ಆತ ತನ್ನ ಮುಂದಿನ ಜನ್ಮದಲ್ಲಿ ಜಿಂಕೆಯಾಗಿ ಹುಟ್ಟಿದ ಅಂತ ಕಥೆ. ಇದು ಒಂದು ದೃಷ್ಟಾಂತ ಕಥೆ ಅನ್ಕೋಬಹುದು. 

ಅರ್ಥ ಇಷ್ಟೇ, ನಾವು ಜೀವನ ಪರ್ಯಂತ ಏನೆಲ್ಲಾ ಸಾಧನೆ ಮಾಡಿದ್ರೂ ಕೂಡಾ, ಅಂತ್ಯಕಾಲದಲ್ಲಿ ಭಗವಂತನ ನೆನಪು ಬಾರದೇ ಹೋದ್ರೆ ಹೀಗೆಲ್ಲಾ ಆಗಬಹುದು ಅನ್ನುವ ತಿಳಿ ಹೇಳಿಕೆ.  

ಇದನ್ನೇ ಒತ್ತಿ ಹೇಳ್ತಾ, . . . 'ಸಂಪ್ರಾಪ್ತೇ ಸನ್ನಿಹಿತೇ ಕಾಲೇ ನಹಿ ನಹಿ ರಕ್ಷತಿ  ಢುಕ್ರಿಞಕರಣೇ' ಅಂತ ಹೇಳಿರೋದು ಅನ್ಸುತ್ತೆ.  

ಇದೆಲ್ಲಕ್ಕೂ, ಸ್ಪಷ್ಟಿಕರಣವೋ ಎಂಬಂತೆ, ಶ್ರೀ ಶಂಕರಾಚಾರ್ಯ ಭಗವದ್ಪಾದರು ತಮ್ಮ ಶಿವಾಪರಾಧ ಕ್ಷಮಾಪಣ ಸ್ತೋತ್ರದಲ್ಲಿ ತಾವೇ ಈ ರೀತಿ ಹೇಳಿಕೊಂಡಿರುವುದನ್ನೂ ಗಮನಿಸಬಹುದು - ನಂಗೆ ಇದು ಪೂರಕವಾಗಿಯೂ ಚೆನ್ನಾಗಿಯೂ ಇದೆ ಅನ್ನಿಸ್ತು. 

ವಾರ್ಧಕ್ಯೇ ಚೇಂದ್ರಿಯಾಣಾಂ ವಿಗತಗತಿಮತಿಶ್ಚಾಧಿದೈವಾದಿತಾಪೈಃ
ಪಾಪೈ ರೋಗೈರ್ವಿಯೋಗೈಸ್ತ್ವನವಸಿತವಪುಃ ಪ್ರೌಢಹೀನಂ ಚ ದೀನಮ್ ।
ಮಿಥ್ಯಾಮೋಹಾಭಿಲಾಷೈರ್ಭ್ರಮತಿ ಮಮ ಮನೋ ಧೂರ್ಜಟೇರ್ಧ್ಯಾನಶೂನ್ಯಂ
ಕ್ಷಂತವ್ಯೋ ಮೇಽಪರಾಧಃ ಶಿವ ಶಿವ ಶಿವ ಭೋ ಶ್ರೀಮಹಾದೇವ ಶಂಭೋ ॥ 4॥

ಅರ್ಥಾತ್... "(ನನ್ನ) ವೃದ್ಧಾಪ್ಯ ಕಾಲದಲ್ಲಿ ಇಂದ್ರಿಯಗಳು ಸರಿಯಾಗಿ ಕೆಲಸ ಮಾಡುವ ಶಕ್ತಿ ಮತ್ತು ವಿವೇಚನೆ ಕಳೆದುಕೊಂಡಿವ.  ನನ್ನ ಶರೀರ ವಿಯೋಗ ಹೊಂದಿಲ್ದೇ ಇದ್ರೂ,  ಶಕ್ತಿಗುಂದಿ ವೃದ್ಧಾಪ್ಯದ ಅನೇಕ ತೊಂದರೆಗಳಿಂದ ಜರ್ಝರಿತ ವಾಗಿದ್ರೂ ನಿನ್ನನ್ನು ಧ್ಯಾನಿಸುವುದನ್ನು ಬಿಟ್ಟು ಇನ್ನೂ ಆಸೆ, ಮೋಹಗಳು ಬಿಟ್ಟಿಲ್ಲ. ಆದ್ದರಿಂದ, ಹೇ ಮಹಾದೇವ, ಶಿವನೇ, ಶಂಭುವೇ ನನ್ನನ್ನು ಕ್ಷಮಿಸು."

ಇದನ್ನ ಓದಿದಾಗ, ನಮ್ಗೆ ಏನನ್ಸುತ್ತೆ ಹೇಳಿ ನೋಡೋಣ - ಶ್ರೀ ಶಂಕರಾಚಾರ್ಯರು ಬದುಕಿದ್ದೇ 32 ವರ್ಷಗಳ ಕಾಲ, ಅವರಿಗೇನೂ ವೃದ್ಧಾಪ್ಯ ಸಮೀಪಿಸಿರಲಿಲ್ಲ. ಇದು, ನಮ್ಮಂಥಾ ಸಾಮಾನ್ಯ ಜನರಿಗೆ ಹೇಳಿದ ಹಿತವಚನ ಅನ್ಕೋಬಹುದಲ್ವಾ?

ಹುಟ್ಟು ಸಾವು ನಿಗೂಢ ಅಲ್ವಾ!!

ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಸುಲಭವಾಗಿ ಹೇಳ್ಬಿಟ್ಟ - ತಸ್ಮಾತ್ ಸರ್ವೇಷು ಕಾಲೇಷು ಮಾಮನುಸ್ಮರ . . ಅಂತ.  ಇದು ಸಾಧ್ಯಾನಾ?  ನಾವು ಸಂಸಾರವಂದಿಗರು ಎಲ್ಲವಾಗ್ಲೂ ಧ್ಯಾನ ಮಗ್ನರಾಗಿರುಕ್ಕೆ ಆಗುತ್ತಾ ಎನ್ನುವ ಪ್ರಶ್ನೆ ಮನಸ್ಸಿಗೆ ಬರುವುದು ಸಹಜ. ಈ ಪ್ರಶೆಯನ್ನು ಅರ್ಜುನ ಸಹ ಗೀತಾ ಸಂವಾದ ಸಮಯಯಲ್ಲಿ ಕೇಳಿದ್ದಾನೆ ಹಾಗೂ ಪರಮಾತ್ಮನೇ ಉತ್ತರಿಸಿದ್ದಾನೆ ಕೂಡ, ಮುಂದಿನ ಲೇಖನಗಳಲ್ಲಿ ಇದರ ಬಗ್ಗೆ ನೋಡೋಣ.

ಶ್ರೀ ಶಂಕರರು ಅದಕ್ಕೆಉತ್ತರವಾಗಿ ಹೀಗೆ ಹೇಳಿದಾರೆ. ಮಾಡುವ ಎಲ್ಲಾ ಕೆಲಸಗಳನ್ನು ಭಗವದಾರಾಧನೆಯೆಂದು ಭಾವಿಸ್ತಾ ಮಾಡ್ಕೋತಾ  ಹೋಗ್ಬೇಕು ಅಂತ ಹೇಳ್ತಾ ಶಿವ ಮಾನಸ ಪೂಜೆಯಲ್ಲಿ  ಹೀಗೆ ಹೇಳಿದಾರೆ - 

ಮಾನಸ ಪೂಜೆ ಅಂತ ಯಾಕೆ ಹೇಳಿದಾರೆ ಇದರ ಅನುಕೂಲ ಏನು ಗೊತ್ತಾ?

  • ಇದಕ್ಕೆ ಯಾವುದೇ restrictions ಇರೋದಿಲ್ಲ. ಶುಚಿತ್ವ, ಇತ್ಯಾದಿಗಳೂ ಮಾನಸ ಪೂಜೆಗೆ ಅನ್ವಯಿಸೋದಿಲ್ಲ. ಹಾಗಂತ ಎಲ್ಲವಾಗ್ಲೂ ಇದನ್ನ ಅನ್ವಯಿಸ್ಕೊ ಬಾರದು. 
  • ನಾವು ನಿತ್ಯ ಪೂಜೆ, ವ್ರತ ಕಥೆ ಇತ್ಯಾದಿಗಳಲ್ಲಿ ಅನುಸರಿಸಲೇ ಬೇಕಾದರೂ, ನಾನು ಎದ್ದ ಕೂಡ್ಲೇ ಸ್ನಾನನೇ ಮಾಡಿಲ್ಲ, ಮುಖಾನೇ ತೊಳ್ದಿಲ್ಲ ಅಂತ ಆಗಲೀ, ಊಟಾನಂತರ ಇತ್ಯಾದಿ ಸಮಯಗಳಲ್ಲಿ ಭಗವನ್ಸ್ಮರಣೆಗೆ ಉಪೇಕ್ಷೆ ಬೇಡ ಅನ್ನೋದಕ್ಕೆ ಮಾತ್ರ ಅನ್ವಯಿಸ್ಕೊ ಬೇಕು.
  • ನಾವು ಬೆಳಿಗ್ಗೆ ಎದ್ದಮೇಲೆ ಹಾಸಿಗೆ ಮೇಲೆ ಕೂತ್ಕೊಂಡೇ ಉತ್ತಿಷ್ಟೋತ್ತಿಷ್ಠ ಗೋವಿಂದ . . . ಅಂತ ಹೇಳ್ತಾ ಸ್ತೋತ್ರಾದಿಗಳನ್ನ ಹೇಳ್ಕೋತಿವಲ್ವಾ ಇದೂ ಒಂಥರಾ ಮಾನಸ ಪೂಜೆ.
  • ಶಂಕರರು ಅದಕ್ಕೇ ಎಲ್ಲಾ ನಮ್ಮಕಾರ್ಯ ಕೆಲಸಗಳಲ್ಲೂ, ಎಲ್ಲವಾಗ್ಲೂ ಭಗವನ್ಸ್ಮರಣೆ ಯಲ್ಲಿ ನಾವು ತೊಡಗಿಸಿಕೊಳ್ಳಬಹುದು ಅಂತ 'ಶಿವ ಮಾನಸ ಪೂಜೆ' ಅಂತ ಹೇಳಿದ್ದಾರೆ ಅನ್ಸುತ್ತೆ. 

ವಿಷಯ ಎತ್ಲಾಗೋ ಹೋಯ್ತು... ಶಿವ ಮಾನಸ ಪೂಜೆ ಯ ಈ ಶ್ಲೋಕ ನೋಡೋಣ.

ಆತ್ಮಾ ತ್ವಂ ಗಿರಿಜಾ ಮತಿಃ ಸಹಚರಾಃ ಪ್ರಾಣಾಃ ಶರೀರಂ ಗೃಹಂ

ಪೂಜಾ ತೇ ವಿಷಯೋಪಭೋಗ-ರಚನಾ ನಿದ್ರಾ ಸಮಾಧಿಸ್ಥಿತಿಃ |

ಸಂಚಾರಃ ಪದಯೋಃ ಪ್ರದಕ್ಷಿಣವಿಧಿಃ ಸ್ತೋತ್ರಾಣಿ ಸರ್ವಾ ಗಿರೋ

ಯದ್ಯತ್ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್ || 4 ||  

(ನಾನು ಅರ್ಥೈಸಿಕೊಂಡಂತೆ)  -

ನೀನೇ ನನ್ನ ಆತ್ಮ, ಪಾರ್ವತಿಯೇ ಧೀ ಶಕ್ತಿ (ಮತಿ); ನನ್ನ (ಪಂಚ) ಪ್ರಾಣಗಳು ನಿನ್ನ ಸೇವಕರು (ಸಹಚರರು); ನನ್ನ ದೇಹವೇ ನಿನ್ನ ಮನೆ; ನನ್ನ ಇಂದ್ರೀಯ ಇಂದ್ರಿಯಾಸಕ್ತಿ / ವಿಷಯಾಸಕ್ತಿ ಎಲ್ಲವೂ ನಿನ್ನ ಪೂಜೆಯೇ; ನಿದ್ರಾವಸ್ಥೆ ನಿನ್ನ ನಿರ್ವಿಕಲ್ಪ ತನ್ಮಯ ಸ್ಥಿತಿ; ನಡಿಗೆ, ಸಂಚಾರವೆಲ್ಲವೂ ನಿನಗೆ ಪ್ರದಕ್ಷಿಣೆ, ನಾವಾಡುವ ಮಾತೆಲ್ಲವೂ ನಿನ್ನಯ ಸ್ತೋತ್ರವೇ, ಮಾಡುವ ಕೆಲಸ ಕಾರ್ಯಗಳೆಲ್ಲವೂ ನಿನ್ನಯ ಆರಾಧನೆ    ಚೆನ್ನಾಗೇ ಹೇಳಿದಾರೆ ಅಲ್ವ...

ನಾವು ಮಾಡುವ ಎಲ್ಲಾ ಕೆಲಸಗಳನ್ನು ಭಗವದಾರಾಧನೆಯೆಂದು ಭಾವಿಸ್ತಾ ಮಾಡ್ಕೋತಾ ಹೋಗ್ಬಹುದು. ಇಷ್ಟಂತೂ ಸಾಧಿಸಬಹುದು. ಹೀಗ್ಮಾಡೋದ್ರಿಂದ . . . ಸಂಪ್ರಾಪ್ತೇ ಸನ್ನಿಹಿತೇ ಕಾಲೇ ನಹಿ ನಹಿ ರಕ್ಷತಿ  ಢುಕ್ರಿಞಕರಣೇ ಯಿಂದ ತಪ್ಪಿಸ್ಕೊ ಬಹುದಲ್ವಾ.  

NB : ಆದಿ ಶಂಕರಾಚಾರ್ಯ ವಿರಚಿತ 'ಸಾಧನಾಪಂಚಕಮ್ ' ಕೂಡ ಒಂದು ಅಪೂರ್ವ ಕೊಡುಗೆ. ಒಬ್ಬ ಸಾಧಕ ಅನುಸರಿಸಬಹುದಾದ  ರೀತಿ-ನೀತಿಗಳನ್ನು ತಿಳಿಸುತ್ತೆ.  ಇದನ್ನ ಓದಿದಾಗ, ಈ ಶ್ಲೋಕಕ್ಕೆ ಸ್ವಲ್ಪ ಪೂರಕವಾಗಿದೆ ಅನ್ನಿಸದಿರದು. 

ಓಂ ತತ್ಸತ್,

"ಶೃತಿ ಸ್ಮೃತಿ ಪುರಾಣಾನಾಮಾಲಯಮ್ ಕರುಣಾಲಯಮ್ | ನಮಾಮಿ ಭಗವತ್ಪಾದ ಶಂಕರಮ್ ಲೋಕ ಶಂಕರಮ್" ||

Author: Respected Shri. RaamaMurthy

---------------------- to be contd.

]]>
https://shevadhi.com/2024/12/22/bhajagovindam-shloka-1/feed/ 0 144
Intro to the Upcoming Blog posts on BhajaGovindam https://shevadhi.com/2024/12/13/intro-to-the-upcoming-blog-posts-on-bhajagovindam/ https://shevadhi.com/2024/12/13/intro-to-the-upcoming-blog-posts-on-bhajagovindam/#respond Fri, 13 Dec 2024 13:12:49 +0000 https://shevadhi.com/?p=128 ಹರಿಃ ಓಂ

ಶ್ರುತಿ ಸ್ಮೃತಿ ಪುರಾಣಾನಾಂ ಆಲಯಂ ಕರುಣಾಲಯಂ |  ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಂ ||

श्रुति स्मृति पुराणानां आलयं करुणालयाम् | नमामि भगवत्पादं शंकरं लॊक शंकरम् ||

ಶ್ರೀ ಶಂಕರಾಚಾರ್ಯ ವಿರಚಿತ  ಭಜ ಗೋವಿಂದಂ ಭಜ ಗೋವಿಂದಂ . . (ಮೋಹಮುದ್ಗರ).:

ಮೋಹಮುದ್ಗರ - ಇದರ ಹಿನ್ನೆಲೆ ಸ್ವಲ್ಪ ನೋಡೋದಾದ್ರೆ, ಶಂಕರಾಚಾರ್ಯರು ಕಾಶಿಯಲ್ಲಿ ಗಂಗಾ ಸ್ನಾನ ಮಾಡಿ, ವಿಶ್ವನಾಥನ ದರ್ಶನಕ್ಕೆ ಬರ್ತಿದ್ದಾಗ, ಒಬ್ಬ ವಯೋವೃದ್ಧರು, ವ್ಯಾಕರಣ ಶಾಸ್ತ್ರ ಓದ್ತಿದ್ದರಂತೆ. ಅದನ್ನು ನೋಡಿದಾಗ ಅವರಿಗೆ ಅನುಕಂಪ ಉಂಟಾಗಿ, ಈತ ತನ್ನ ಅಂತ್ಯಕಾಲ ಸಮೀಪಿಸುತ್ತಿರುವಾಗಲೂ, ಭಗವಂತನ ಸ್ಮರಣೆಗೆ ಹೆಚ್ಚು ಒತ್ತು ಕೊಡದೇ, ವ್ಯಾಕರಣ ಶಾಸ್ತ್ರ ಓದ್ತಿದಾನಲ್ಲಾ ಅನ್ನಿಸಿದಾಗ ಈ ಶ್ಲೋಕಗಳು ಸ್ಫುರಿಸಿದವು ಅಂತ ಹೇಳ್ತಾರೆ. 

ನಂಗೆ ಇಲ್ಲಿ ಸ್ವಲ್ಪ-ಕಸಿ ವಿಸಿ ಅನ್ಸಕ್ಕೆ ಶುರುವಾಯ್ತು. 

ವೃದ್ಧಾಪ್ಯದಲ್ಲಿ ವ್ಯಾಕರಣ ಶಾಸ್ತ್ರ ಓದ್ಬಾರದೇ ?, ಹಾಗೇನಿಲ್ಲ ನಮ್ಮ ವೃದ್ಧಾಪ್ಯದ ವೇಳೆಗೆ ನಮ್ಮ ಓದು, ವಿದ್ಯಾಭ್ಯಾಸ ಒಂದು ಘಟ್ಟ ತಲ್ಪಿರುತ್ತೆ, ಮನನ ಮಾತ್ರ ಮಾಡ್ತಾ, ಭಗವಂತನ ಸ್ಮರಣೆಗೆ ಹೆಚ್ಚಿನ ಆದ್ಯತೆ ಕೊಡ್ಬೇಕು ಅನ್ನೋ ಉದ್ದೇಶ ಆದಿ ಶಂಕರಾಚಾರ್ಯರದ್ದಾಗಿರಬಹುದು ಅಂತಾನೂ ಸಮಾಧಾನ ಪಟ್ಕೊಂಡೆ.  

ನಂಗೆ ಹಂಗೆ ಅನ್ಸಿದ್ರೂ, ನಂಗೆ ಅಂತಲ್ಲಾ ಎಲ್ರಿಗೂ  "ಜ್ಞಾನಿಗಳಾದ, ಶ್ರೀ ಶಂಕರಾಚಾರ್ಯರು", ವೃದ್ಧಾಪ್ಯದಲ್ಲಿ ವ್ಯಾಕರಣ ಶಾಸ್ತ್ರ ಓದ್ಬಾರದು ಅಂತ  ಹೇಳಿರುವ ಸಾಧ್ಯತೆ ಇದೆಯೇ? ಅನ್ನಿಸಬಹುದಲ್ವಾ, ನಂಗೂ ಹಾಗೇ ಅನ್ಸಕ್ಕೆ ಶುರುವಾಯ್ತು.

ವ್ಯಾಕರಣ ವನ್ನಾಗಲೀ, ಯಾವುದೇ ಶಾಸ್ತ್ರ, ಭಗವದ್ಗೀತೆ, ಉಪನಿಷದ್ಗಳು, ಬ್ರಹ್ಮಸೂತ್ರ ಇತ್ಯಾದಿಗಳನ್ನ ತಿಳಿಯಲು, ಅಭ್ಯಸಿಸಲು ವಯಸ್ಸಿನ ಕಟ್ಟುಪಾಡು ಹಾಕಿಕೊಳ್ಳಲು ಆಗುತ್ಯೇ?. ಖಂಡಿತಾ ಇಲ್ಲ ಆಲ್ವಾ. 

ಸ್ವಲ್ಪ ಅಂತರ್ಜಾಲಗಳಲ್ಲೂ, ಕೆಲವು ಪುಸ್ತಕಗಳನ್ನೂ ತಡಕಾಡಿದೆ. ಸ್ವಲ್ಪ ಸಮಾಧಾನಕರವಾದ ಸುಳಿವು ತಿಳಿವು ಸಿಕ್ತು. 

ದರ್ಶನಕಾರರು, ವಿಮರ್ಶಕರು, ಸಂಶೋಧಕರು ಹೇಳುವಂತೆ ಅದನ್ನೂ ಗಮನಿಸೋದಾದ್ರೆ ಅದು ಬೇರೆಯೇ ಆಗಿದೆ. 

ನಮಗೆ ಅದು ಇಷ್ಟವಾಗದಿದ್ರೂ, ಗಮನಾರ್ಹವಾಗಿದೆ ಅನ್ಸುತ್ತೆ. 

ಮುಖ್ಯವಾಗಿ ಸ್ವಯಂಪ್ರಕಾಶ ಸ್ವಾಮಿನ್ ಅವರ ಪ್ರಕಾರ, ಹಾಗೂ ಪ್ರತಿಪಾದನೆ (Govt Oriental Library, Chennai, ನಲ್ಲಿರುವ ಹಸ್ತಪ್ರತಿ/ತಾಳೇಗರಿ ಪ್ರಕಾರ), ನಾವು ಪಲ್ಲವಿ ಯಾಗಿ ಹೇಳುವ ಭಜ ಗೋವಿಂದಂ ಭಜ ಗೋವಿಂದಂ . . ಮೂಲಪ್ರತಿಯಲ್ಲಿ ಇರುವುದಿಲ್ಲವಾಗಿಯೂ, ಅಲ್ದೇ, ವೃದ್ಧನ ಬಗ್ಗೆ ಯಾಗಲೀ, ವ್ಯಾಕರಣದ ಬಗ್ಗೆ ಯಾಗಲೀ, ಉಲ್ಲೇಖವೇ ಇಲ್ಲವಂತೆ. ಇದನ್ನು ಓದಿದಾಗ ಸ್ವಲ್ಪ ಸಮಾಧಾನವಾಯ್ತು 

ಹೀಗಿರುವಾಗ, ವೃದ್ಧಾಪ್ಯದಲ್ಲಿ ವ್ಯಾಕರಣ ಶಾಸ್ತ್ರ ಓದ್ಬಾರದು ಅಂತ ಜ್ಞಾನಿಗಳಾದ, ಶ್ರೀ ಶಂಕರಾಚಾರ್ಯರು ಹೇಳಿರುವ ಸಾಧ್ಯತೆಯೇ ಇಲ್ಲ, ಹಾಗಾಗಿ ವಯೋಮಾನ ಯಾವುದೇ ಶಾಸ್ತ್ರವನ್ನಾಗಲೀ, ವ್ಯಾಕರಣ ಶಾಸ್ತ್ರವೇ ಆಗಲಿ ಅಧ್ಯಯನ ಮಾಡಬಾರದು ಅಂತ ಹೇಳಿರುವ ಸಾಧ್ಯತೆ ಇಲ್ಲ ಅಂತ ಅನ್ಕೋಬಹುದು.  

ಈ ಶ್ಲೋಕವನ್ನ ನಂತರದಲ್ಲಿ, ಭಕ್ತಾದಿಗಳೋ, ದಾರ್ಶನಿಕರೋ ಸೇರಿಸಿರಬಹುದಾಗಿದೆ. 

ಇಲ್ಲಿ, ನಾವು ಗಮನಿಸಬಹುದಾದ ಮತ್ತೊಂದು ಅಂಶ ಅಂದ್ರೆ, 1200 ವರ್ಷಗಳ ಹಿಂದೆ, ಶ್ರೀ ಶಂಕರಾಚಾರ್ಯರು ರಚಿಸಿದ ಕಾಲದಲ್ಲಿ ದಾಖಲಾತಿಗೆ (Documentation) ಅಷ್ಟಾಗಿ ಪ್ರಾಮುಖ್ಯತೆ ಇರಲಿಲ್ಲವಾಗಿ, ಇರಲಿಲ್ಲ ಅನ್ನೋದಕ್ಕಿಂತ ಈಗಿನ ಹಾಗೆ paper, pen ಇರಲೇ ಇಲ್ವಲ್ಲ, ಅವರಿಗೆ ಅದು ಅವಶ್ಯಕತೆಯೂ ಅಗಿರ್ಲಿಲ್ವೇನೋ, ತಾಳೇಗರಿಯಲ್ಲಿ ಒಂದೋ ಎರಡೋ ಪ್ರತಿ ಮಾಡಿಟ್ಕೊಂಡ್ರೆ ಅದೇ ಅವ್ರಿಗೆ ಸಾಕಾಗಿರ್ತಿತ್ತು, ಬರೀ ಕಂಠಸ್ತ ಪದ್ಧತಿಯೇ ಪ್ರಚಲಿತವಿತ್ತಾಗಿ, ಆಗಿನ ಗುರುಪರಂಪರೆಯಲ್ಲಿ, ಶಿಷ್ಯರಿಗೆ ಬೋಧಿಸುವ ಸಮಯದಲ್ಲಿ ಗುರುಗಳು ಅಲ್ಪಸ್ವಲ್ಪ ಬದಲಾವಣೆ ಯೊಂದಿಗೆ, ಅಲ್ಪಸ್ವಲ್ಪ ಸೇರ್ಪಡೆಯಾಗಿದ್ದಲ್ಲಿ ಆಶ್ಚರ್ಯಪಡ ಬೇಕಾದ್ದಿಲ್ಲ ಅಲ್ವಾ. 

ಮಹಾಭಾರತದ ಕರ್ಣನ, ದುರ್ಯೋಧನನ ಪಾತ್ರಗಳನ್ನ ಹಲವರು 'ನಾಯಕನ ಪಾತ್ರದಂತೆ' ಪ್ರತಿಬಿಂಬಿಸಿರುವುದನ್ನೂ, ಪ್ರತಿನಿಧಿಸಿರುವುದನ್ನೂ ನಾವು ಓದಿರ್ತೀವಲ್ವಾ, ಇದೂ ಹಾಗೇ ಆಗಿರಬಹುದು. ಅವರವರ ಭಾವಕ್ಕೆ ಅರ್ಥವಿವರಣೆ ಕೊಡ್ತಾ ಹೋಗ್ತಾರೆ. 

ಇರಲಿ, "ನಮಗೆ ಇಷ್ಟವಾಗದಿದ್ರೂ" ಅಂತ ಹೇಳ್ದೆ ಆಲ್ವಾ, ಯಾಕಂದ್ರೆ, ನೀವೇ ನೋಡಿ - ಪಲ್ಲವಿ ಯಾಗಿ ಹೇಳುವ ಭಜ ಗೋವಿಂದಂ ಭಜ ಗೋವಿಂದಂ . . ಅನ್ನು ಬಿಟ್ಟು ಬೇರೆ ಶ್ಲೋಕ ಗಳನ್ನು ಮಾತ್ರ ಹೇಳಿಕೊಳ್ಳಲು ಸಾಧ್ಯವಾಗುತ್ತಾ ಅಂತ. ಸಾಧ್ಯವೇ ಇಲ್ಲ ಅನ್ಸುತ್ತೆ, ನಾವು ಅದಕ್ಕೆ ಎಷ್ಟು  ಹೊಂದ್ಕೊಂಡು ಬಿಟ್ಟಿದೀವಿ ಅಂದ್ರೆ,  "ಮೋಹ ಮುದ್ಗರ" ಅನ್ನೋದಕ್ಕಿಂತ " *ಭಜ ಗೋವಿಂದಂ ಭಜ ಗೋವಿಂದಂ . .* " ಅಂತಾನೇ ಹೇಳುವುದು ಪ್ರಸ್ತುತ ವಾಗಿ ಬಿಟ್ಟಿದೆ ಆಲ್ವಾ. 

ಹಾಗಾಗಿ, ತರ್ಕ ವಿತರ್ಕ ಅದೆಲ್ಲಾ ಏನೇ ಇರ್ಲಿ, ನಂಗೆ ಅನ್ಸೋದು, ಈಗಿರವಂತೆಯೇ ಅದಕ್ಕೆ ನಾವು ಹೊಂದಿಕೊಂಡಿರುವಂತೆಯೇ ಅದರಲ್ಲಿನ ತತ್ವಗಳನ್ನ ಪ್ರಧಾನವಾಗಿಟ್ಕೊಂಡು, ಬಾಕಿ ಎಲ್ಲಾ ವಿಷಯಗಳನ್ನ  ದರ್ಶನಕಾರರು, ವಿಮರ್ಶಕರು, ಚಾರಿತ್ರಿಕರು, ಸಂಶೋಧಕರು ಗಳಿಗೇ ಬಿಟ್ಬಿಡೋಣ, ಮುಂದೆ ಸಾಗೋಣ, ಅದೇ ಸೂಕ್ತ ಅನ್ಸುತ್ತೆ. 

ಇಲ್ಲಿ ನಾವು ನೋಡ್ಬೇಕಾಗಿರೋದು ನಂಗೆ ಅನ್ನಿಸಿದಹಾಗೆ, “ಭಜಗೋವಿಂದಂ. . . (ಮೋಹಮುದ್ಗರ)" -  ಇದರಲ್ಲಿನ ಶ್ಲೋಕ ಗಳಲ್ಲಿ ಮುಖ್ಯವಾಗಿ ನಮ್ಮಲ್ಲಿರುವ ಅತಿಯಾದ ಆಸೆ, ಅತಿಯಾದ ಮೋಹ ಒಳ್ಳೆಯದಲ್ಲ, ಇವುಗಳನ್ನು ಕಡಿಮೆ ಮಾಡಿಕೊಳ್ತಾ ಹೋಗಬೇಕು ಅನ್ನೋ ಸಂದೇಶ ಇದೆ. ಇದನ್ನ ಸ್ವಲ್ಪ ಕಠಿಣವಾಗೇ ಶ್ರೀ ಶಂಕರಾಚಾರ್ಯರು ಹೇಳಿದಾರೇನೋ ಅಂತ ಕೆಲವು ವ್ಯಾಖ್ಯಾನಕಾರರು ಹೇಳುವುದೂ ಇದೆ. ಮೋಹವನ್ನು ಸುತ್ತಿಗೆಯಲ್ಲಿ ಹೊಡೆದಂತೆ (hammering) ಹೊಡಿದೋಡಿಸು ಅನ್ನೋ ರೀತಿ ಹೇಳಿದಾರೆ ಅಂತ "ಮೋಹಮುದ್ಗರ" ಅಂತಲೂ ಇದನ್ನು ಕರೆಯಲಾಗಿದೆ ಅಂತಲೂ ಹೇಳ್ತಾರಾದ್ರೂ, ಎಲ್ಲಾ ಶ್ಲೋಕಗಳೂ ನಾವು ಬದುಕುವ ರೀತಿಗೆ ಕನ್ನಡಿ ಹಿಡ್ದು ತೋರಿಸುವಂತಿದೆ ಅನ್ನೋದಂತೂ ಖಂಡಿತ.  

ಶ್ರೀ ಶಂಕರಾಚಾರ್ಯರು ಎಲ್ಲೂ ಯಾವುದನ್ನೂ ಬೇಡ ಅನ್ನೋದಿಲ್ಲ. ಎಲ್ಲವೂ ಮಿತಿಯಲ್ಲಿರಬೇಕು. ಯಾವುದರಲ್ಲೂ ಅತಿಯಾದರೆ ನಮ್ಮ ಶಾಂತಿ, ನೆಮ್ಮದಿ ಕಳ್ಕೊಂಡು ಖಿನ್ನ ಮನಸ್ಕರಾಗ್ತೀವಿ ಅನ್ನೋದೇ ಆಗಿದೆ. ನಮ್ಮೆಲ್ಲಾ ಸಮಯವನ್ನು ಧನಾರ್ಜನೆಗೇ ವ್ಯಯಿಸದೆ, ಸ್ವಲ್ಪವಾದರೂ ಸಮಯವನ್ನ ಭಗವಂತನ ಧ್ಯಾನದ ಕಡೆಗೆ ಮೀಸಲಾಗಿಡಬೇಕೆಂಬುದು, ಅದರಿಂದ ಶಾಂತಿ, ನೆಮ್ಮದಿ ಕಂಡುಕೊಳ್ಳಬಹುದು ಅನ್ನೋದೇ ಆಗಿದೆ ಅಂತ ಅನ್ಕೋಬಹುದು ಅನ್ಸುತ್ತೆ.  

ಅವರ ಅರ್ಥದಲ್ಲಿ, ಪ್ರಾಪಂಚಿಕ ಸಂಪತ್ತೆಲ್ಲವೂ ನಶಿಸಿಹೋಗಬಹುದಾದದ್ದು, ಭಗವದ್ಚಿಂತನೆ, ಧ್ಯಾನಾದಿಗಳು ಶಾಂತಿ ನೆಮ್ಮದಿಯನ್ನು ಕೊಡುವಂಥದ್ದು.

ಹಾಗೆಯೇ ನಮ್ಮಲ್ಲಿ, ಪಠಣ ಕ್ರಮ  ಹೇಗಿದೆ ಅಂತ ನೋಡೋದಾದ್ರೆ,  ಸ್ವಲ್ಪದರಲ್ಲಿ ಹೇಳ್ಬೇಕು ಅಂದ್ರೆ - ಭಜಗೋವಿಂದಂ ಸ್ತೋತ್ರದಲ್ಲಿ ಮೊದಲನೇ ಶ್ಲೋಕವನ್ನು ಪಲ್ಲವಿ ಎಂದು ಪರಿಗಣಿಸ್ತಾ ಪ್ರತೀ ಶ್ಲೋಕದ ನಂತರ ಹೇಳುವ ಪರಿಪಾಠವೇ ಆಗಿ ಬಂದಿದೆ. 

ನೆನ್ನೆ, ನಾನು ದೇವಸ್ಥಾನದಲ್ಲಿ ನೋಡಿದಾಗ, ಅವರು ಅನುಸರಿಸಿದ ರೀತಿಯೂ ಅದೇ ಆಗಿತ್ತು. ಒಂದು ಶ್ಲೋಕವನ್ನು ಹೇಳಿದನಂತರ, ಉಳಿದವರು ಎಲ್ಲರೂ ಒಂದಾಗಿ ಪಲ್ಲವಿಯನ್ನು ಪುನರಾವರ್ತಿತವಾಗಿ ಹೇಳ್ತಿದ್ರು. 

ಭಜಗೋವಿಂದಂ ಸ್ತೋತ್ರದಲ್ಲಿ ಮೊದಲನೇ ಶ್ಲೋಕವನ್ನು ಪಲ್ಲವಿ ಎಂದು ಪರಿಗಣಿಸ್ತಾರೆ ಅಂತ ಹೇಳ್ದೆ ಆಲ್ವಾ, ನಂತರದ ಹನ್ನೆರಡು ಶ್ಲೋಕಗಳನ್ನು ಶಂಕರಾಚಾರ್ಯರೇ ರಚಿಸಿರುವರೆಂದೂ ಇದನ್ನು "ದ್ವಾದಶ ಮಂಜರಿಕಾ ಸ್ತೋತ್ರ" ವೆಂದು ಹೇಳಲಾಗಿದೆ. 

ನಂತರದಲ್ಲಿ, ಅವರೊಡನಿದ್ದ ಹದಿನಾಲ್ಕು ಶಿಷ್ಯರೂ *ದ್ವಾದಶ ಮಂಜರಿಕಾ ಸ್ತೋತ್ರ* ದಿಂದ ಸ್ಫೂರ್ತಿ ಗೊಂಡು ಪ್ರತಿಯೊಬ್ಬರೂ ಇದಕ್ಕೆ ಪೂರಕವೋ ಎಂಬಂತೆ  ಒಂದೊಂದು ಶ್ಲೋಕಗಳನ್ನು ರಚಿಸಿ ಧನ್ಯರಾಗಿದ್ದಾರೆ. ಇದು  *"ಚತುರ್ದಶಾ ಮಂಜರಿಕಾ ಸ್ತೋತ್ರಮ್"* ಎಂದೇ ಪ್ರಸಿದ್ಧಿ.  

ಇದರಿಂದ ಸುಪ್ರಸನ್ನರಾದ ಆಚಾರ್ಯರು ಮತ್ತೂ ನಾಲ್ಕು ಶ್ಲೋಕಗಳನ್ನು ರಚಿಸಿ ಶಿಷ್ಯರನ್ನು ಹಾಗೂ ನಮ್ಮನ್ನು ಆಶೀರ್ವದಿಸಿದ್ದಾರೆ. ಹೀಗಾಗಿ ಭಜಗೋವಿಂದಂ 31 ಶ್ಲೋಕಗಳನ್ನೊಳಗೊಂಡ ಆಧ್ಯಾತ್ಮಿಕ ರತ್ನ ಭಂಡಾರವೆನಿಸಿಕೊಂಡಿದೆ. 

ಇದರೊಂದಿಗೆ ಸ್ತೋತ್ರಮಂಜರಿಯಲ್ಲಿ ಇಲ್ದೇ ಇದ್ರೂ, ಮತ್ತೆರಡು ಶ್ಲೋಕಗಳನ್ನ ಸಮಾರೋಪ ಶ್ಲೋಕವಾಗಿ ಹೇಳಿಕೊಳ್ಳುವುದೂ ಇದೆ. (ಇದು ಯಾರ ರಚನೆ ಅನ್ನೋದು ಗೊತ್ತಿಲ್ಲವಾಗಿ ಹೇಳ್ತಾರಾದ್ರೂ ಚೆನ್ನಾಗಂತೂ ಇದೆ, ಭಾವಪೂರ್ವಕ ಇದನ್ನೂ ಸೇರಿಸಿ ಹೇಳಿಕೊಳ್ಳಬಹುದಾಗಿದೆ). 

ನಾವೂ ಕೂಡ ಶ್ರೀ ಶಂಕರ ಭಗವದ್ಪಾದರ ಅನುಜ್ಞೆಯಂತೆ "ಸೋಹಮ್" ಭಾವದ ಕಡೆ ಸಾಗುವ ಪ್ರಯತ್ನವನ್ನು ಹಾಕೋಣ, ಸಾಧ್ಯವಾದಾಗಲೆಲ್ಲಾ ಒಂದೊಂದೇ ಶ್ಲೋಕಗಳ ಅರ್ಥಗ್ರಹಣೆಗೆ, ವಾಸ್ತವಿಕತೆಯ ಬಗ್ಗೆ ಗಮನ ಹರಿಸೋಣ. 

ಶ್ರೀ ಶ್ರೀ ಜಗದ್ಗುರು ಆದಿ ಶಂಕರಾಚಾರ್ಯರ ಅನುಗ್ರಹ ನಮ್ಮ ಮೇಲಿರಲಿ, ಎಲ್ಲರಿಗೂ ದೊರೆಯುವಂತಾಗಲಿ ಎಂದು ಆಶಿಸ್ತಾ -

 ಓಂ ತತ್ಸತ್

"ಶೃತಿ ಸ್ಮೃತಿ ಪುರಾಣಾನಾಮಾಲಯಮ್ ಕರುಣಾಲಯಮ್ | ನಮಾಮಿ ಭಗವತ್ಪಾದ ಶಂಕರಮ್ ಲೋಕ ಶಂಕರಮ್" ||

Author: Respected Shri. RaamaMurthy

Next: Bhaja Govindam Shloka # 1

]]>
https://shevadhi.com/2024/12/13/intro-to-the-upcoming-blog-posts-on-bhajagovindam/feed/ 0 128
Gorgeous Garden Goodness https://shevadhi.com/2024/12/12/decorating-with-peony/ https://shevadhi.com/2024/12/12/decorating-with-peony/#respond Thu, 12 Dec 2024 17:32:20 +0000 https://shevadhi.com/2024/12/12/decorating-with-peony/
]]>
https://shevadhi.com/2024/12/12/decorating-with-peony/feed/ 0 36
New Sightseeing Location https://shevadhi.com/2024/12/12/new-sightseeing-location/ https://shevadhi.com/2024/12/12/new-sightseeing-location/#respond Thu, 12 Dec 2024 17:32:20 +0000 https://shevadhi.com/2024/12/12/new-sightseeing-location/

]]>
https://shevadhi.com/2024/12/12/new-sightseeing-location/feed/ 0 35
Beauty is not in the face; beauty is a light in the heart – Kahlil Gibran https://shevadhi.com/2024/12/12/a-real-glow-getter/ https://shevadhi.com/2024/12/12/a-real-glow-getter/#respond Thu, 12 Dec 2024 17:32:19 +0000 https://shevadhi.com/2024/12/12/a-real-glow-getter/

]]>
https://shevadhi.com/2024/12/12/a-real-glow-getter/feed/ 0 33
Life is a Great Teacher https://shevadhi.com/2024/12/12/my-new-experience/ https://shevadhi.com/2024/12/12/my-new-experience/#respond Thu, 12 Dec 2024 17:32:18 +0000 https://shevadhi.com/2024/12/12/my-new-experience/
]]>
https://shevadhi.com/2024/12/12/my-new-experience/feed/ 0 31