ಹರಿಃ ಓಂ
ಶ್ರುತಿ ಸ್ಮೃತಿ ಪುರಾಣಾನಾಂ ಆಲಯಂ ಕರುಣಾಲಯಂ |
ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಂ ||
श्रुति स्मृति पुराणानां आलयं करुणालयाम् |
नमामि भगवत्पादं शंकरं लॊक शंकरम् ||
ಶ್ಲೋಕ 2:
ಮೂಢ ಜಹೀಹಿ ಧನಾಗಮತೃಷ್ಣಾಮ್ ಕುರುಸದ್ಬುದ್ಧಿಂ ಮನಸಿ ವಿತೃಷ್ಣಾಮ್ |
ಯಲ್ಲಭಸೇ ನಿಜ ಕರ್ಮೋಪಾತ್ತಂ ವಿತ್ತಂ ತೇನ ವಿನೋದಯ ಚಿತ್ತಮ್ ||2||
ತೊರೆಯಲೆ ಮೂಢನೆ ಧನದಾಹವನು, ಸುಬುದ್ಧಿಯಿಂ ಪಡೆ ತೃಪ್ತಿಯ ಮನದಲಿ
ನೀ ದುಡಿದುದರಿಂದೇಂ ಪಡೆಯುವೆಯೋ ಅದರಲೆ ನಿನ್ನಯ ಮನವನು ತಣಿಸು || (ಅನುವಾದ).
ಎಲೈ ಮೂಢ..! ಹಣವು ಬರಲೆಂಬ ಆಸೆಯನ್ನು (ಧನದಾಹವನ್ನು) ಬಿಡು. ಮನಸ್ಸಿನಲ್ಲಿರುವ ಆಸೆಯನ್ನು ತೊರೆದು ಸದ್ವಿಚಾರವನ್ನು ಮಾಡ ಬೇಕೆಂಬ ಬುದ್ಧಿಯನ್ನು ತಂದುಕೊ. ನೀನು ಮಾಡುವ ಕೆಲಸದಿಂದ (ನಿಜ ಕರ್ಮೋಪಾತ್ತಂ - ನಿಜ+ಕರ್ಮಾ+ಉಪಾತ್ತಮ್ -> ನಿನ್ನ ನಿಜ ದುಡಿತದಿಂದ) ಎಷ್ಟು ಹಣ ನಿನಗೆ ದೊರೆಯುತ್ತದೆಯೋ ಅಷ್ಟನ್ನು ಬಳಸಿ ಮನಸ್ಸಿಗೆ ತೃಪ್ತಿಯನ್ನು ತಂದುಕೊ (ವಿನೋದಯ ಚಿತ್ತಮ್).
(ಯಲ್ಲಭಸೇ - ಯತ್ + ಲಭಸೇ, ತೃಷ್ಣಾ ಅಂದ್ರೆ ದಾಹ, ವಿತೃಷ್ಣಾ ಅಂದ್ರೆ ದಾಹರಹಿತ ವಾದದ್ದು).
ಶಂಕರ ಭಗವತ್ಪಾದರು ಇಲ್ಲಿ ಹೇಳೋದು, "ಮೂಢ ಜಹೀಹಿ ಧನಾಗಮತೃಷ್ಣಾಮ್" ಅಂದ್ರೆ ಹಣವು ಬರಲೆಂಬ ಆಸೆಯನ್ನು (ಧನದಾಹವನ್ನು) ಬಿಡು, ಧನ ಮೋಹಿತನಾಗಿ, ಅದಕ್ಕೇ ಆದ್ಯತೆ, ಪ್ರಾಮುಖ್ಯತೆ ಕೊಟ್ರೆ ಮೂಢ ಮತ್ತು ಅವಿವೇಕಿಯಾಗ್ತೀಯ ಅಂತ.
ಶಂಕರ ಭಗವತ್ಪಾದರು, ಮುಂದುವರೀತ - 'ಕುರುಸದ್ಬುದ್ಧಿಂ ಮನಸಿ ವಿತೃಷ್ಣಾಮ್ '- ಮನಸ್ಸಿನಲ್ಲಿರುವ (ಧನದಾಹ) ಆಸೆಯನ್ನು ತೊರೆದು ಸದ್ವಿಚಾರವನ್ನು ಮಾಡಬೇಕೆಂಬ ಬುದ್ಧಿಯನ್ನು ತಂದುಕೊ. Develop a desire for righteousness in your mind. ಅಂತ ಹೇಳ್ತಾರಲ್ಲ ಹಾಗೆ ಮತ್ತು
'ಯಲ್ಲಭಸೇ ನಿಜ ಕರ್ಮೋಪಾತ್ತಂ ವಿತ್ತಂ ತೇನ ವಿನೋದಯ ಚಿತ್ತಮ್ ' - ಅಂದ್ರೆ ನೀನು ಮಾಡುವ ಕೆಲಸದಿಂದ (ನಿಜ ಕರ್ಮೋಪಾತ್ತಂ) ಅಂದ್ರೆ ನಾವು ಮಾಡುವ ಯಾವುದೇ ಉದ್ಯೋಗದಿಂದ ಎಷ್ಟು ಹಣ ಸಂಪಾದನೆ ಆಗುತ್ತದೆಯೋ, ದೊರೆಯುತ್ತದೆಯೋ ಅಷ್ಟನ್ನು ಬಳಸಿ ಮನಸ್ಸಿಗೆ ತೃಪ್ತಿಯನ್ನು ತಂದುಕೊ. - satisfy your mind with whatever wealth you acquire through your true work, through that .
ಎಲ್ಲರಲ್ಲೂ ಅಲ್ದಿದ್ರೂ ಕೆಲವರಲ್ಲಿ ಧನದಾಹ, ಸಂಪಾದನೆ ಅನ್ನೋದು ಮಿತಿ ಮೀರಿ ಎಷ್ಟರ ಮಟ್ಟಿಗೆ ಆಗ್ಬಿಟ್ಟಿದೆ ಅಂದ್ರೆ 'ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷೋಭವ' ಅಂತಾರಲ್ಲ ಹಾಗೆ ಏನಕೇನ ಪ್ರಕಾರೇಣ ಧನ ಸಂಪಾದನೆ ಮಾಡು, ಅಂತ ಆಗ್ಬಿಟ್ಟಿದೆ.
ಭರ್ತೃಹರಿ ಹೇಳ್ತಾನೆ -
"ಯಸ್ಯಾಸ್ತಿ ವಿತ್ತಂ ಸ ನರಃ ಕುಲೀನಃ, ಸ ಪಂಡಿತಃ ಸ ಶ್ರುತವಾನ್ಗುಣಜ್ಞಃ ।
ಸ ಏವ ವಕ್ತಾ ಸ ಚ ದರ್ಶನೀಯಃ ಸರ್ವೇ ಗುಣಾಃ ಕಾಂಚನಂ ಆಶ್ರಯಂತಿ ।।"
ಇಲ್ಲಿ ಭರ್ತೃಹರಿ ಒಂದು ರೀತಿಯಾಗಿ ಧನವನ್ನ ಪ್ರಶಂಸೆ ಮಾಡಿರೋದು, ಧನವಂತನನ್ನಲ್ಲ. ಆದ್ರೆ ಆಗಿರೋದು ಏನು ಗೊತ್ತಾ.
ಧನ ಪಿಪಾಸುಗಳು ಬೇರೆಲ್ಲಾ ಸುಭಾಷಿತ ಗಳಿಗಿಂತ ಈ ಸುಭಾಷಿತವನ್ನ ಚೆನ್ನಾಗಿ ಅರ್ಥೈಸಿಕೊಂಡು, ನಿಜವೇ ಅಂತ ಒಪ್ಕೊಂಡು ಆಹ್ವಾನಿಸಿಕೊಂಡು ಬಿಟ್ಟಿರ್ತಾರೆ.
ಹಾಗಾಗಿ ಅವರ ಧನಾರ್ಜನೆ ಹೇಗೂ ಆಗಬಹುದು, ಯಾವುದೇ ಮಟ್ಟಕ್ಕೆ ಹೋಗಬಹುದು. ನಾವು ಕಷ್ಟಪಟ್ಟು ದುಡಿದು Tax ಕಟ್ತೀವಲ್ವಾ, ಅವ್ರು ಅದನ್ನೂ ತಪ್ಪಿಸ್ಕೊಳ್ತಾರೆ. ನಮ್ಗೆ ಉದ್ಯೋಗ ಕಟ್ಟಿಕೊಳ್ಳಲು Merit ಬೇಕು. ಆದ್ರೆ, ಅವರ demerit ಕೂಡಾ merit ಆಗ್ಬಿಡುತ್ತೆ.
ಹೋಗ್ಲಿ, ಇವರುಗಳಾಗಲೀ, ಶ್ರೀಮಂತರು ದೊಡ್ಡ ದೊಡ್ಡ ಉದ್ಯೋಗಿಗಳು, ಸಿನೆಮಾ ನಟರು ತುಂಬಾ ತುಂಬ ಹಣಗಳಿಸಿದವರಲ್ಲಿ ಎಷ್ಟು ಜನ ಸುಖ ಶಾಂತಿಯಿಂದ ಬದುಕ್ತಿದಾರೆ?.
ಸಂಪತ್ತನ್ನ ಗಳಿಸೋ ಹಾದಿಯಲ್ಲಿ ಕ್ಲೇಶವುಂಟಾಗುತ್ತೆ, ಅದನ್ನು ಕಾಪಾಡೋ ಪ್ರಯತ್ನದಲ್ಲಿ ಅತಿಯಾದ ಒತ್ತಡಾನ ಅನುಭವಿಸ್ತಾರಲ್ವ. ಕೆಲವರು depression ಗೆ ಒಳಗಾಗಿ ಆತ್ಮಹತ್ಯೆ ಮಾಡ್ಕೊಂಡಿರೋದನ್ನ ಓದ್ತಿರ್ತೀವಲ್ವಾ. ಇದು ಯಾಕೆ ಹೀಗೆ?. ಧನ ಸಂಪಾದನೆಯ ನಿಟ್ಟಿನಲ್ಲಿ ಅರೋಗ್ಯನೂ ಕೈಕೊಡ್ತಾ, ಕುಂಠಿತಗೊಳ್ತಾ ಹೋಯ್ತು, ಸುಖ ಶಾಂತಿ ಅನ್ನೋದು ಇವ್ರಿಗೆ ಇಲ್ಲವಾಗಿ ಹೋಯ್ತು ಅಲ್ವಾ.
ಹಾಗೆಯೇ ಭರ್ತೃಹರಿ ಯ "ವೈರಾಗ್ಯಶತಕ"ದಲ್ಲಿ ನಿತ್ಯಸಂತುಷ್ಟನಾದ ಒಬ್ಬ ವಿರಕ್ತನಾದವನು ರಾಜನಿಗೆ ಹೇಳುವ ಮಾತನ್ನ ನೋಡಿ: "ಎಲೈ ರಾಜ, ನಾವು ನಾರು ಬಟ್ಟೆಗಳಿಂದ ಸಂತುಷ್ಟರಾಗಿದ್ದೇವೆ, ನೀನು ರೇಷ್ಮೆಯ ಬಟ್ಟೆಗಳಿಂದ ಸಂತುಷ್ಟನಾಗಿದ್ದೀಯೆ. ನಮ್ಮಿಬ್ಬರ ಸಂತೋಷವೂ ಒಂದೇ. ಇದರಲ್ಲಿ ವಿಶೇಷವಿಲ್ಲದ್ದೇ ಒಂದು ವಿಶೇಷ. ಮನಸ್ಸು ತೃಪ್ತವಾದಾಗ ಧನಿಕನಾರು? ದರಿದ್ರನಾರು?"
ವಯಮಿಹ ಪರಿತುಷ್ಟಾಃ ವಲ್ಕಲೈಸ್ತ್ವಂ ದುಕೂಲೈಃ ಸಮ ಇವ ಪರಿತೋಷೋ ನಿರ್ವಿಶೇಷೋ ವಿಶೇಷಃ |
ತು ಭವತು ದರಿದ್ರೋ ಯಸ್ಯ ತೃಷ್ಣಾ ವಿಶಾಲಾ ಮನಸಿ ಚ ಪರಿತುಷ್ಟೇ ಕೋಽರ್ಥವಾನ್ ಕೋ ದರಿದ್ರಃ ||
ಇದರ ಕನ್ನಡ ತರ್ಜುಮೆ ಎಷ್ಟು ಚೆನ್ನಾಗಿದೆ ನೋಡಿ -
ನಾರುಮಡಿ ಉಟ್ಟರೂ ನಮಗುಂಟು ತೃಪ್ತಿ ಸೊಗಸಾದ ಬಟ್ಟೆಬರೆ ಉಟ್ಟ ನಿಮ್ಮಷ್ಟೇ! |
ಆಸೆ ಹೆಚ್ಚಿದವ ನಿಜದಿ ಬಡವ; ಇಲ್ಲದಿರೆ ಬಡವ ಧನಿಕರ ಭೇದ ಕಾಣುವುದೆ ಇಲ್ಲ |
ಒಬ್ಬ ಶ್ರೀಮಂತ, ಧನ ಸಂಪಾದನೆಯಲ್ಲಿ ಎಷ್ಟು ಮುಳುಗಿ ಹೋಗಿದ್ದ ಅಂದ್ರೆ, ಅವನ ಮುದ್ದಿನ ಮಗಳ ಜೊತೆ ಮಾತಾಡೋದಕ್ಕೂ ಸಮಯವಿರಲಿಲ್ಲವಂತೆ. ಒಂದಿನ, ಆ ಮಗು ತನ್ನಲ್ಲಿ ಒಟ್ಟುಗೂಡಿಸಿಕೊಂಡಿದ್ದ ಪುಡಿಕಾಸನ್ನೆಲ್ಲಾ ತಗೊಂಡ್ಹೋಗಿ ಅಪ್ಪನ ಮುಂದಿಟ್ಟು ನಂಗೂ ಸ್ವಲ್ಪ ಹೊತ್ತಿನ appointment ಕೊಡು, ನಾನೂ ನಿನ್ಹತ್ರ ಸ್ವಲ್ಪ ಮಾತಾಡ್ಬೇಕು ಅಂತ ಕೇಳ್ತಂತೆ. ಧನ ದಾಹ ಆ ಮಟ್ಟಕ್ಕೆ ಹೋಗ್ಬಾರ್ದಲ್ವಾ.
"ಜಾಗ್ರತ ಪಂಚಕಮ್" ನಲ್ಲಿ ಆದಿ ಶಂಕರಾಚಾರ್ಯರು ಹೀಗೂ ಎಚ್ಚರಿಸ್ತಾರೆ
ಕ್ಷಣಂ ವಿತ್ತಂ, ಕ್ಷಣಂ ಚಿತ್ತಂ, ಕ್ಷಣಂ ಜೀವಿತಮೇವಚ| ಯಮಸ್ಯ ಕರುಣಾ ನಾಸ್ತಿ, ತಸ್ಮಾತ್ ಜಾಗ್ರತ ಜಾಗ್ರತ||
ವಿತ್ತ, ಚಿತ್ತ, ಜೀವಿತ ಎಲ್ಲವೂ ಕ್ಷಣಿಕವೇ. ಯಮನಿಗೆ ದಯೆ ಎಂಬುದಿಲ್ಲ, ಆದ್ದರಿಂದ ಎಚ್ಚರ, ಎಚ್ಚರ!!
ಇದು ಶಂಕರ ಭಗವತ್ಪಾದರ ಹಿತೋಕ್ತಿ, ನಮಗೆ ಅನುಸರಣೀಯವೂ ಹೌದು. ನಾಣ್ನುಡಿ: ನಾವು ಯಾವುದನ್ನು ಹೊ೦ದಿಲ್ಲವೋ ಅದರ ಬಗ್ಗೆ ಚಿ೦ತಿಸುವುದನ್ನು ಬಿಟ್ಟು, ನಮ್ಮಲ್ಲಿ ಇರುವುದರ ಬಗ್ಗೆ ಹೆಮ್ಮೆ ಪಡುವುದು ಲೇಸು!
ಓಂ ತತ್ಸತ್, ಶ್ರೀ ರಾಮಮೂರ್ತಿ
