ಹರಿಃ ಓಂ
ಶ್ರುತಿ ಸ್ಮೃತಿ ಪುರಾಣಾನಾಂ ಆಲಯಂ ಕರುಣಾಲಯಂ |
ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಂ ||
श्रुति स्मृति पुराणानां आलयं करुणालयाम् |
नमामि भगवत्पादं शंकरं लॊक शंकरम् ||
ಎರಡನೆಯ ಶ್ಲೋಕದಲ್ಲಿ ಶ್ರೀ ಶಂಕರ ಭಗವದ್ಪಾದರು, ಧನ ಮೋಹದಬಗ್ಗೆ, ಸಂಪತ್ತನ್ನು ಸಂಗ್ರಹಿಸುವ ಆಸೆಯನ್ನು ಹತೋಟಿಯಲ್ಲಿಡುವುದರ ಬಗೆಗೆ ಎಚ್ಚರಿಕೆಯನ್ನು ನೀಡಿದ ನಂತರ, ಲೈಂಗಿಕತೆಯ ಬಗ್ಗೆ ಎಚ್ಚರಿಕೆಯ ನುಡಿಗಳನ್ನು ಈ ಶ್ಲೋಕದಲ್ಲಿ ಹೇಳಹೊರಟಿದ್ದಾರೆ.
ನಮ್ಮಲ್ಲಿ 'ಕಾಮ' ಅನ್ನೋ ಪದದ ಅರ್ಥ ಬಯಕೆ, ಆಸೆ, ಭಾವೋದ್ವೇಗ, ಸಂತೋಷ, ವಾತ್ಸಲ್ಯ, ಅಥವಾ ಪ್ರೀತಿ, ಇಂದ್ರಿಯಗಳ ಆನಂದ, ಅಂತೆಲ್ಲಾ ಇದೆ. ಆದ್ರೆ, ಕಾಮ ಅಂದಕೂಡ್ಲೇ ನಾವು ಅರ್ಥೈಸಿಕೊಳ್ಳೋದು ನಮ್ಮ ಮನದಮುಂದೆ ಹಾದುಹೋಗೋದು ಲೈಂಗಿಕ ಬಯಕೆ, ಲೈಂಗಿಕ ಸುಖ, ಲೈಂಗಿಕ ತೃಪ್ತಿ ಅಂತೆಲ್ಲಾ ಅಲ್ವಾ!!ಶ್ರೀ ಶಂಕರ ಭಗವದ್ಪಾದರು ಇಲ್ಲಿ, ಲೈಂಗಿಕತೆಯ ಬಗ್ಗೆ ಎಚ್ಚರಿಕೆಯ ನುಡಿಗಳನ್ನು ಈ ಶ್ಲೋಕದಲ್ಲಿ ಹೇಳಹೊರಟಿರೋದ್ರಿಂದ ನಾವು ಈ ಅರ್ಥದಲ್ಲೇ ನೋಡ್ತಾ, ಭಾರತೀಯ ಸಂಸ್ಕೃತಿಯಲ್ಲಿ ಇದನ್ನು ಹೇಗೆ ಅರ್ಥೈಸಿದಾರೆ ಅಂತ ಸ್ವಲ್ಪ ಇಣುಕು ನೋಟ ಹರಿಸೋಣ.
ಶ್ಲೋಕ 3:
ನಾರೀ ಸ್ತನಭರ ನಾಭೀದೇಶಂ ದೃಷ್ಟ್ವಾ ಮಾ ಗಾ ಮೋಹಾವೇಶಮ್ |
ಏತನ್ಮಾಂಸ ವಸಾದಿ ವಿಕಾರಂ ಮನಸಿ ವಿಚಿಂತಯಾ ವಾರಂ ವಾರಮ್ || 03 ||
ಸ್ತ್ರೀಯರ ಸ್ತನಗಳನ್ನು ನಾಭಿ (ಹೊಕ್ಕಳು) ಪ್ರದೇಶವನ್ನು ನೋಡಿ ಮೋಹಕ್ಕೆ ಬೀಳಬೇಡ (ಮಾ=ಬೇಡ, ಗಾ - ಅಂದ್ರೆ ಬೀಳೋದು don't fall ಅಂತೀವಲ್ಲ ಹಾಗೆ). ಅದೆಲ್ಲವೂ (ದೇಹವು) ಮೂಳೆ ಮಾಂಸದ, ಕೊಬ್ಬು ಮುಂತಾದವುಗಳ ವಿಕಾರವೆಂದು ಮನಸ್ಸಿನಲ್ಲಿ ಮತ್ತೆ ಮತ್ತೆ ತಂದುಕೊ. (ಅನುವಾದ).
ಈ ಶ್ಲೋಕದ ಬಗ್ಗೆ ವ್ಯಾಖ್ಯಾನಕಾರರು, ಒಂದು ಟೀಕೆ ಮಾಡ್ತಾರೆ. ಸನ್ಯಾಸಿಗಳಾದ ಶಂಕರರು ವಿಷಯಾಸಕ್ತಿ, ಕಾಮದಬಗ್ಗೆ ಚರ್ಚಿಸಿರೋದು ಸರಿಯೇ? ಅನ್ನೋದು. ಇನ್ನು ಕೆಲವರು, ಇದು ಸಾಧಕರಿಗೆ ಉಪದೇಶವೇ ಹೊರತು, ಸಂಸಾರಸ್ಥರಿಗೆ ಅಲ್ಲ ಅಂತ ಹೇಳುವವರೂ ಇದಾರೆ.
ವ್ಯಾಖ್ಯಾನಕಾರರಿಗೆ, ' ನಾರೀ ಸ್ತನಭರ ', 'ನಾಭೀದೇಶಂ' (ಹೊಕ್ಕಳು) ಅನ್ನೋ ಪದ ಶಬ್ದ ಸ್ವಲ್ಪ ಇರುಸು ಮುರಸು ಅನ್ಸಿರ ಬಹುದು.
ನಂಗೆ ಭಕ್ತ ಕುಂಬಾರ ಸಿನೆಮಾದ ಒಂದು ಹಾಡು ಜ್ಞಾಪಕಕ್ಕೆ ಬರುತ್ತೆ - " ಮಾನವಾ ದೇಹವು ಮೂಳೆ ಮಾಂಸದ ತಡಿಕೆ ಇದರ ಮೇಲಿದೆ ತೊಗಲಿನ ಹೊದಿಕೆ ತುಂಬಿದೆ ಒಳಗೆ ಕಾಮಾದಿ ಬಯಕೆ . . . . " - ರಚನೆ ಹುಣಸೂರು ಕೃಷ್ಣಮೂರ್ತಿ ಅಂದುಕೊಂಡಿದೀನಿ - ಅಲ್ಲೂ ಇದನ್ನೇ ಹೇಳಿದಾರೆ, ಆದ್ರೆ ಇಲ್ಲಿ ಕಿವಿಗೆ ಇಂಪಾಗಿದೆ, ಚೆನ್ನಾಗಿ ಹೇಳಿದಾರೆ ಅನ್ಸುತ್ತೆ ಅಲ್ವಾ. ಯಾಕೆ - ಇಲ್ಲಿ 'ನಾರೀ ಸ್ತನಭರ ', 'ನಾಭೀದೇಶಂ' ಅನ್ನೋ ಪದವಾಗಲಿ ತತ್ಸಮಾನ ಪದಗಳಾಗಲೀ ಇಲ್ಲ.
ಅವರು ಉಜ್ಜಯಿನಿ ರಾಜನ ಪರಕಾಯ ಪ್ರವೇಶ ಮಾಡಿದಾಗ ರಾಣಿಯರು, ದಾಸಿಯರು ಎಲ್ಲರೂ ಅವರ ಹಿಂದೆಮುಂದೆ ಇರುವಾಗ ಅವರ ಇಂದ್ರಿಯ ನಿಗ್ರಹ ಎಷ್ಟು ಕಷ್ಟ ಸಾಧ್ಯ ವಾಗಿರಬಹುದು, ಹೇಗಿದ್ದಿರಬಹುದು, ಮಾಗಾ ಮೋಹಾವೇಶಮ್ . . . . (ಮನಸೇ ಮೋಹವೇಶಕ್ಕೆ ಒಳಗಾಗಬೇಡ) ಅಂತ ತಮಗೆ ತಾವೇ ಅದೆಷ್ಟು ಸಲ ಹೇಳಿಕೊಂಡಿರಬಹುದೋ ಅನ್ಸುತ್ತೆ. ಆ ಸಂದರ್ಭದ ಇಂದ್ರಿಯ ನಿಗ್ರಹ ಎಂಥಾ ಅದ್ಭುತ ಅನ್ಸುತ್ತೆ. ಹಾಗಿರುವಾಗ, ಶಂಕರರು ವಿಷಯಾಸಕ್ತಿ, ಕಾಮದಬಗ್ಗೆ ಚರ್ಚಿಸಿರೋದು, ಕಾಮ ವಿಕಾರ ವಾದ್ರೆ, ಕ್ರೋಧವಾದ್ರೆ ಅನಾಹುತ ತಪ್ಪಿದ್ದಲ್ಲ ಅಂತ ಸ್ವಲ್ಪ ಗಟ್ಟಿಯಾಗಿ ಎಚ್ಚರ್ಸಿರೋದ್ರಲ್ಲಿ ತಪ್ಪೇನಿಲ್ಲ ಅನ್ಸುತ್ತೆ. (ಇದು ನನ್ನಅನಿಸಿಕೆ ಮನಸ್ನಲ್ಲಿ ಬಂದದ್ದು - ಹೆಚ್ಚಿನ ಪ್ರಾಮುಖ್ಯತೆ ಬೇಡ).
ಕೆಲವರಿಗೆ, ಹಣಸಂಪಾದನೆಯೇ ಗುರಿಯಾಗಿ, ಸಂಗ್ರಹಿಸಿದ್ದನ್ನು ಸದ್ವಿನಿಯೋಗಿಸದೇ, ಮನೋ ಧಾವತಿ ಸರ್ವತ್ರ ಮದೋನ್ಮತ್ತಗಜೇಂದ್ರವತ್ ಅಂತ ಸುಭಾಷಿತ ಹೇಳುತ್ತಲ್ಲ ಹಾಗೆ, ಇವರ ಮನಸ್ಸೂ ಮದವೇರಿದ ಆನೆಯಂತೆ ಎತ್ತೆತ್ತಲೋ ಓಡೋದಕ್ಕೆ ಶುರು ಆದ್ರೆ, ಇದು, ವಿಷಯ ಲೋಲುಪತೆಗೆ ತಿರುಗಿದ್ರೆ ಅನಾಹುತ ತಪ್ಪಿದ್ದಲ್ಲ. ರಾಮಾಯಣ, ಮಹಾಭಾರತ, ಚರಿತ್ರೆ ಇವುಗಳಲ್ಲೆಲ್ಲಾ ಇದರ ಬಗ್ಗೆ ಓದಿರ್ತೀವಿ. ಅಷ್ಟೆಲ್ಲಾ ಯಾಕೆ, ಪತ್ರಿಕೆಗಳಲ್ಲೂ ಅತ್ಯಾಚಾರ, ಅನಾಚಾರಗಳಬಗ್ಗೆ ಸುದ್ಧಿಗಳು ಹರಿದಾಡ್ತಾನೆ ಇರುತ್ತೆ ಅಲ್ವಾ. ಹೀಗಾಗಬಾರ್ದು ಅಂತ ಎಚ್ಚರಿಸ್ತಿದಾರೆ ಶ್ರೀ ಶಂಕರರು.
ಈ ಶ್ಲೋಕದ ಬಗ್ಗೆ ಅತಿಯಾದ ಅರ್ಥ ಕಲ್ಪಿಸಿಕೊಳ್ಳೋದು ಬೇಡ. ಶ್ರೀ ಶಂಕರರು ವಿಷಯಾಸಕ್ತಿಯನ್ನು ಖಂಡಿಸಲು ಹೋಗುವುದಿಲ್ಲ. ಕಾಮ ವಿಕಾರ ವಾದ್ರೆ, ಕ್ರೋಧವಾದ್ರೆ ಅನಾಹುತ ತಪ್ಪಿದ್ದಲ್ಲ ಅಂತ ಎಚ್ಚರಿಸ್ತಿದಾರೆ ಅನ್ನೋದನ್ನ ಗಮನದಲ್ಲಿಟ್ಕೊಳೋಣ. ಭಗವಾನ್ ಶ್ರೀಕೃಷ್ಣ ಭಗವದ್ಗೀತೆಯ ಏಳನೆಯ ಅಧ್ಯಾಯದಲ್ಲಿ ಈ ಬಗ್ಗೆ ಹೇಳಿರುವ ಶ್ಲೋಕ ವನ್ನು ಇಲ್ಲಿ ನಾವು ನೆನಪಿಸಿಕೊಳ್ಳಬಹುದು:
बलं बलवतां चाहं कामरागविवर्जितम् |
धर्माविरुद्धो भूतेषु कामोऽस्मि भरतर्षभ || 7.11||
ಲೈಂಗಿಕ ಕ್ರಿಯೆಯು ಕೇವಲ ಇಂದ್ರಿಯ ಸುಖಕ್ಕಾಗಿ ಮಾತ್ರ ಕೈಗೊಳ್ಳಲ್ಪಟ್ಟು, ಯಾವುದೇ ನಿಯಂತ್ರಕ ತತ್ವಗಳಿಂದ ಮುಕ್ತವಾದಾಗ, ಅದನ್ನು ಪಶುತ್ವ ಅಥವಾ ಪಶುತ್ವ ಎಂದು ಪರಿಗಣಿಸಲಾಗುತ್ತದೆ. ಆದರೆ, ಗೃಹಸ್ಥನು ಸಂತಾನೋತ್ಪತ್ತಿಗಾಗಿ ನಡೆಸಿದಾಗ, ಅದನ್ನು ಧರ್ಮಗ್ರಂಥಗಳ ಸೂಚನೆಗಳಿಗೆ ಅನುಗುಣವಾಗಿ ಪರಿಗಣಿಸಲಾಗುತ್ತದೆಯೇ ಹೊರತು ವಿರುದ್ಧವಾದ ಸದ್ಗುಣವಲ್ಲ. ಇಲ್ಲಿ, ಶ್ರೀ ಕೃಷ್ಣನು ವಿವಾಹದ ಸಂಸ್ಥೆಯೊಳಗೆ, ಗೃಹಸ್ಥನ ನಿಯಂತ್ರಿತ, ಸದ್ಗುಣಶೀಲ ಮತ್ತು ಸದುದ್ದೇಶಪೂರಿತ ಲೈಂಗಿಕ ಚಟುವಟಿಕೆ ಎಂದು ಉಲ್ಲೇಖಿಸಿದ್ದಾನೆ.
ನಮ್ಮಲ್ಲಿ ನಾಲ್ಕು ಪುರಷಾರ್ಥಗಳನ್ನ ಹೇಳುವಾಗ,ಎಲ್ಲಕ್ಕೂ ಮೊದಲು ಧರ್ಮ. ಮುಂದಿನ ಎಲ್ಲವನ್ನೂ ಧರ್ಮದ ದೃಷ್ಟಿ ಯಿಂದಲೇ ನೋಡಬೇಕು ಅನ್ನೋ ಅರ್ಥ ಇದರಲ್ಲಿ ಅಡಗಿದೆ ಅಂತ ಹೇಳ್ತಾರೆ. ಅರ್ಥ ಕಾಮಗಳು ಧರ್ಮದ ಚೌಕಟ್ಟಿನಲ್ಲಿದ್ದಾಗ ಇವು ಪುರುಷಾರ್ಥಗಳಾಗುತ್ತವೆ. ಇವುಗಳ ಇತಿ ಮಿತಿ ಗಳ ಅರಿವು ಇರಬೇಕು ಮತ್ತು ಕಾಮ ವಿಕಾರ ವಾದ್ರೆ, ಕ್ರೋಧವಾದ್ರೆ ಅನಾಹುತ ತಪ್ಪಿದ್ದಲ್ಲ ಅಂತ ಎಚ್ಚರಿಸ್ತಿದಾರೆ ಅನ್ನೋದನ್ನ ಗಮನದಲ್ಲಿಟ್ಕೊಳೋಣ.
ಅನಂತ ಸಂತೋಷವನ್ನು ತಲುಪುವ ಗುರಿಯುಳ್ಳ ಸಾಧಕನಾದವನು ಅನಿಯಮಿತ ಸಂಪತ್ತನ್ನು ಗಳಿಸುವ ದಾಹವನ್ನು ಮತ್ತು ಕಾಮುಕ ಲೈಂಗಿಕ ಪ್ರಚೋದನೆ ಯನ್ನು ಜಯಿಸಬೇಕು. ಇವುಗಳ ಇತಿ ಮಿತಿ ಗಳ ಅರಿವು ಇರಬೇಕು ಅಂತ ಎಚ್ಚರಿಸ್ತಿದಾರೆ. ಈ ಶ್ಲೋಕದ ಅಂತರಾರ್ಥ ಇದು ಅಂದುಕೊಳ್ಳಬಹುದಲ್ವೆ.
ಹಿತಕಾಮ ಮಿತಕಾಮ ವಿಕಟಕಟಕಾಮ| ಸತ್ಕಾಮ ದುಷ್ಕಾಮ ಸುರಾಸುರರ ಕಾಮ||ಎಂತಪ್ಪ ಜನರಿಹರೋ ಅಂತಪ್ಪ ಕಾಮ| ನಿಷ್ಕಾಮ ಕಾಮ್ಯತೆಯೆ ಗುರಿಯಿರಲಿ ಮೂಢ ||
ಓಂ ತತ್ಸತ್, ಶ್ರೀ ರಾಮಮೂರ್ತಿ
