Bhaja Govindam – Shloka 3

ಹರಿಃ ಓಂ

ಶ್ರುತಿ ಸ್ಮೃತಿ ಪುರಾಣಾನಾಂ ಆಲಯಂ ಕರುಣಾಲಯಂ |
ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಂ ||

श्रुति स्मृति पुराणानां आलयं करुणालयाम् |
नमामि भगवत्पादं शंकरं लॊक शंकरम् ||

ಎರಡನೆಯ ಶ್ಲೋಕದಲ್ಲಿ ಶ್ರೀ ಶಂಕರ ಭಗವದ್ಪಾದರು, ಧನ ಮೋಹದಬಗ್ಗೆ, ಸಂಪತ್ತನ್ನು ಸಂಗ್ರಹಿಸುವ ಆಸೆಯನ್ನು ಹತೋಟಿಯಲ್ಲಿಡುವುದರ ಬಗೆಗೆ ಎಚ್ಚರಿಕೆಯನ್ನು ನೀಡಿದ ನಂತರ, ಲೈಂಗಿಕತೆಯ ಬಗ್ಗೆ ಎಚ್ಚರಿಕೆಯ ನುಡಿಗಳನ್ನು ಈ ಶ್ಲೋಕದಲ್ಲಿ ಹೇಳಹೊರಟಿದ್ದಾರೆ.

ನಮ್ಮಲ್ಲಿ 'ಕಾಮ' ಅನ್ನೋ ಪದದ ಅರ್ಥ ಬಯಕೆ, ಆಸೆ, ಭಾವೋದ್ವೇಗ, ಸಂತೋಷ, ವಾತ್ಸಲ್ಯ, ಅಥವಾ ಪ್ರೀತಿ, ಇಂದ್ರಿಯಗಳ ಆನಂದ, ಅಂತೆಲ್ಲಾ ಇದೆ. ಆದ್ರೆ, ಕಾಮ ಅಂದಕೂಡ್ಲೇ ನಾವು ಅರ್ಥೈಸಿಕೊಳ್ಳೋದು ನಮ್ಮ ಮನದಮುಂದೆ ಹಾದುಹೋಗೋದು ಲೈಂಗಿಕ ಬಯಕೆ, ಲೈಂಗಿಕ ಸುಖ, ಲೈಂಗಿಕ ತೃಪ್ತಿ ಅಂತೆಲ್ಲಾ ಅಲ್ವಾ!!  
ಶ್ರೀ ಶಂಕರ ಭಗವದ್ಪಾದರು ಇಲ್ಲಿ, ಲೈಂಗಿಕತೆಯ ಬಗ್ಗೆ ಎಚ್ಚರಿಕೆಯ ನುಡಿಗಳನ್ನು ಈ ಶ್ಲೋಕದಲ್ಲಿ ಹೇಳಹೊರಟಿರೋದ್ರಿಂದ ನಾವು ಈ ಅರ್ಥದಲ್ಲೇ ನೋಡ್ತಾ, ಭಾರತೀಯ ಸಂಸ್ಕೃತಿಯಲ್ಲಿ ಇದನ್ನು ಹೇಗೆ ಅರ್ಥೈಸಿದಾರೆ ಅಂತ ಸ್ವಲ್ಪ ಇಣುಕು ನೋಟ ಹರಿಸೋಣ.
ಪ್ರಾಚೀನ ಭಾರತದಲ್ಲಿ ಕಾಮ ಒಂದು ಕಲೆ ಮತ್ತು ಲೈಂಗಿಕತೆ ಒಂದು ವಿಜ್ಞಾನವೇ ಆಗಿತ್ತು ಹಾಗೂ  ಪ್ರಚಲಿತದಲ್ಲಿತ್ತು  ಅನ್ನೋದಕ್ಕೆ ಹಲವಾರು ಪುಸ್ತಕ, ಗ್ರಂಥಗಳು ಸಾಕ್ಷಿಯಾಗಿವೆ. ಧಾರ್ಮಿಕವಾಗಿ ನಡೆಸುವ ಷೋಡಶ (16) ಸಂಸ್ಕಾರಗಳಲ್ಲಿ ಗರ್ಭದಾನ ಮೊದಲನೆಯದು, ಪುಂಸವನ ಹಾಗೂ ವಿವಾಹದಂತಹಾ ಸಂಸ್ಕಾರಗಳ ಆಚರಣೆ ಗಳಲ್ಲೂ ಕಾಮದ ಮಹತ್ವ ಹಾಗೂ ಧಾರ್ಮಿಕತೆಯನ್ನು ಕಾಣಬಹುದು. ಇಲ್ಲಿ ನಾವು ಗಮನಿಸಬೇಕಾದ್ದು - ಕಾಮ ಮತ್ತು ಲೈಂಗಿಕತೆಯನ್ನು ಪ್ರಜನನಕ್ಕೆ (ವಂಶಾಭಿವೃದ್ಧಿ ಸಂತಾನೋತ್ಪತ್ತಿ ) ಸೀಮಿತವಾಗಿಸಿ  ಧಾರ್ಮಿಕವಾಗಿ ಅನುಸರಣೀಯವಾಗಿತ್ತು  ಅನ್ನೋದು.  
ಇದು ಯಾವಾಗ  ತನ್ನ ಪ್ರಜ್ಞಾ ಪರಿಧಿಯನ್ನು ಮೀರಿ ಮೋಹ, ಬಯಕೆ ಯಾಗ ತೊಡಗಿ ದೇಶ, ಕಾಲ, ಸಂಸ್ಕೃತಿಯ ಸ್ವಾಸ್ಥ್ಯಕ್ಕೆ ಪತಿಬಂಧಕರೂಪ ವಾಯ್ತೋ ಆಗ ಇದನ್ನ ಶತ್ರುವಾಗಿ ಪರಿಗಣಿಸ್ತಾ ಹೋಗಿರಬಹುದು. 
ಅರಿಷಡ್ವರ್ಗಗಳಲ್ಲಿ (ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ತು ಮಾತ್ಸರ್ಯ) ಕಾಮಕ್ಕೇ ಮೊದಲ ಸ್ಥಾನ ಕೊಟ್ಟಿರೋದು ನೋಡ್ದಾಗ ನಂಗೆ ಹಾಗನ್ಸತ್ತೆ.  
ನೋಡಿ, ಅದೇ ಪುರುಷಾರ್ಥಗಳಲ್ಲಿ  ( ಧರ್ಮ, ಅರ್ಥ, ಕಾಮ, ಮೋಕ್ಷ ) ಕಾಮದ ಸ್ಥಾನವು  ಮೂರನೆಯದು ಹಾಗೂ ಇದನ್ನು ಇಲ್ಲಿ ಪುರುಷಾರ್ಥ ವಾಗೂ ಪರಿಗಣಿಸಲಾಗಿದೆ. ಯಾಕೆ - ಇಲ್ಲಿ ಅರ್ಥ ಹಾಗೂ ಕಾಮಕ್ಕೆ ಧರ್ಮದ ಆಧಾರ ಬೆಂಬಲ ಸೂಚ್ಯವಾಗಿದೆ. ಅಂದ್ರೆ ಅರ್ಥ ಕಾಮಗಳು ಧರ್ಮದ ಚೌಕಟ್ಟಿನಲ್ಲಿದ್ದಾಗ ಇವು ಪುರುಷಾರ್ಥಗಳಾಗುತ್ತವೆ. 
ಸುಮ್ನೆ ಒಂದೆರಡು ಧಾರ್ಮಿಕಉಪದೇಶಗಳನ್ನ ನೋಡಿ - 
ಬ್ರಹ್ಮಚರ್ಯಾಶ್ರಮದಿಂದ, ಗೃಹಸ್ಥಾಶ್ರಮ ಸ್ವೀಕರಿಸಲು ಸಿದ್ಧನಾದವನಿಗೆ ಹೇಳುವ -  
ಸಮಾವೃತ್ತಸ್ತು ಗಾರ್ಹಸ್ಥ್ಯೇ ಸದಾರೋ ನಿಯತೋ ವಸೇತ್।
(ಸಮಾವರ್ತನೆಯ ನಂತರ ಗೃಹಸ್ಥನಾಗಿ ಪತ್ನಿಯೊಡನೆ ನಿಯತನಾಗಿ ವಾಸಿಸಬೇಕು).
ಹಾಗೆಯೇ ವಿವಾಹ ಸಮಯದಲ್ಲಿ - 
ಧರ್ಮೇಚ, ಅರ್ಥೇಚ, ಕಾಮೇಚ, ಮೋಕ್ಷೇಚ, ನಾತಿಚರಿತವ್ಯಾ ತ್ವಯೇಯಂ ಅಂತ ವರನಿಗೆ ಆದೇಶಿಸಿ ವರನಿಂದ 'ನಾತಿಚರಾಮಿ, ನಾತಿಚರಾಮಿ, ನಾತಿಚರಾಮಿ’ ಅಂತ ಹೇಳ್ಸೋದು, ಪ್ರತಿಜ್ಞೆ ಮಾಡ್ಸೋದು ಇವುಗಳೆಲ್ಲ ಒಂಥರಾ ಆಧ್ಯಾತ್ಮಿಕ ವಾಗಿ ಕರಾರುಗಳು, ಷರತ್ತುಗಳು ಮತ್ತು ಸ್ತ್ರೀ ಪುರುಷರ ಕಾಮ ಕೇಳಿಯನ್ನ ನಿಯಂತ್ರಣದಲ್ಲಿಡಿಸುವಂಥವುಗಳೇ ಅಲ್ವಾ!! ಇವು ಈಗಲೂ ವಿವಾಹ ಸಂದರ್ಭಗಳಲ್ಲಿ ನಮ್ಮಲ್ಲಿ ಆಚರಣೆಯಲ್ಲಿರೋದನ್ನ ಗಮನಿಸಬಹುದು. 

ಶ್ಲೋಕ 3:
ನಾರೀ ಸ್ತನಭರ ನಾಭೀದೇಶಂ ದೃಷ್ಟ್ವಾ ಮಾ ಗಾ ಮೋಹಾವೇಶಮ್ |
ಏತನ್ಮಾಂಸ ವಸಾದಿ ವಿಕಾರಂ ಮನಸಿ ವಿಚಿಂತಯಾ ವಾರಂ ವಾರಮ್ || 03 ||

ಸ್ತ್ರೀಯರ ಸ್ತನಗಳನ್ನು ನಾಭಿ (ಹೊಕ್ಕಳು)  ಪ್ರದೇಶವನ್ನು ನೋಡಿ ಮೋಹಕ್ಕೆ ಬೀಳಬೇಡ (ಮಾ=ಬೇಡ, ಗಾ - ಅಂದ್ರೆ ಬೀಳೋದು don't fall ಅಂತೀವಲ್ಲ ಹಾಗೆ). ಅದೆಲ್ಲವೂ (ದೇಹವು) ಮೂಳೆ ಮಾಂಸದ, ಕೊಬ್ಬು ಮುಂತಾದವುಗಳ ವಿಕಾರವೆಂದು ಮನಸ್ಸಿನಲ್ಲಿ ಮತ್ತೆ ಮತ್ತೆ ತಂದುಕೊ. (ಅನುವಾದ).

ಸ್ಥೂಲಾರ್ಥ: ಇಲ್ಲಿ ಶ್ರೀ ಶಂಕರ ಭಗವದ್ಪಾದರು  ಸ್ತ್ರೀ ಪುರುಷರ ಆಕರ್ಷಣೆಯನ್ನ ಮನಸ್ನಲ್ಲಿಟ್ಕೊಂಡು ಎಚ್ಚರಿಕೆಯ ನುಡಿಗಳನ್ನ ಹೇಳ್ತಿದಾರೆ. ಪುರುಷರಿಗೆ (ಹಾಗೆಯೇ ಸ್ತ್ರೀ ಯರಿಗೂ ಪುರುಷರ)  ಸ್ತ್ರೀಯರ ಅಂಗಸೌಷ್ಠವವನ್ನು ನೋಡ್ದಾಗ  ಆಕರ್ಷಣೆಗೆ  ಒಳಗಾಗೋದು ಪ್ರಕೃತಿಯ ಸಹಜ ಕ್ರಿಯೆ. ಹಾಗಂತ ಕಾಮುಕನಾಗಬೇಡ,  ಮೋಹಾವೇಶಕ್ಕೆ ಒಳಗಾಗೋದು ಬೇಡ ಅಂತ ಇಲ್ಲಿ ಹೇಳ್ತಿದಾರೆ. ( 'ಸ್ವದಾರ ನಿರತಃ ಸ್ಯಾತ್ ' - ಸ್ವಪತ್ನಿಯಲ್ಲೇ ಆಸಕ್ತನಾಗಿರಬೇಕು ಅಂತ ಸದಾಚಾರ ಸೂತ್ರದಲ್ಲಿ ಹೇಳಿರೋದನ್ನೂ ನಾವು ಮನದಲ್ಲಿಟ್ಕೋ ಬೇಕು).  ಶ್ರೀ ಶಂಕರ ಭಗವದ್ಪಾದರು ಪ್ರಸ್ತುತ ಶ್ಲೋಕದಲ್ಲಿ ಹೇಳೋದು ಕೂಡ 'ಕಾಮ - ಪುರುಷಾರ್ಥ ವಗಾಬೇಕೆಹೊರತು ಮೋಹವಾಗ ಬಾರದು ' ಅನ್ನೋದೇ ಆಗಿದೆ. 

ಈ ಶ್ಲೋಕದ  ಬಗ್ಗೆ ವ್ಯಾಖ್ಯಾನಕಾರರು, ಒಂದು ಟೀಕೆ ಮಾಡ್ತಾರೆ. ಸನ್ಯಾಸಿಗಳಾದ ಶಂಕರರು ವಿಷಯಾಸಕ್ತಿ, ಕಾಮದಬಗ್ಗೆ ಚರ್ಚಿಸಿರೋದು ಸರಿಯೇ? ಅನ್ನೋದು. ಇನ್ನು ಕೆಲವರು, ಇದು ಸಾಧಕರಿಗೆ ಉಪದೇಶವೇ ಹೊರತು, ಸಂಸಾರಸ್ಥರಿಗೆ ಅಲ್ಲ ಅಂತ ಹೇಳುವವರೂ ಇದಾರೆ.  

ವ್ಯಾಖ್ಯಾನಕಾರರಿಗೆ, ' ನಾರೀ ಸ್ತನಭರ ', 'ನಾಭೀದೇಶಂ' (ಹೊಕ್ಕಳು)  ಅನ್ನೋ ಪದ ಶಬ್ದ ಸ್ವಲ್ಪ ಇರುಸು ಮುರಸು ಅನ್ಸಿರ ಬಹುದು. 

ನಂಗೆ ಭಕ್ತ ಕುಂಬಾರ ಸಿನೆಮಾದ ಒಂದು ಹಾಡು ಜ್ಞಾಪಕಕ್ಕೆ ಬರುತ್ತೆ - " ಮಾನವಾ ದೇಹವು ಮೂಳೆ ಮಾಂಸದ ತಡಿಕೆ ಇದರ ಮೇಲಿದೆ ತೊಗಲಿನ ಹೊದಿಕೆ ತುಂಬಿದೆ ಒಳಗೆ ಕಾಮಾದಿ ಬಯಕೆ . . . . "  - ರಚನೆ ಹುಣಸೂರು ಕೃಷ್ಣಮೂರ್ತಿ ಅಂದುಕೊಂಡಿದೀನಿ - ಅಲ್ಲೂ  ಇದನ್ನೇ ಹೇಳಿದಾರೆ, ಆದ್ರೆ ಇಲ್ಲಿ ಕಿವಿಗೆ ಇಂಪಾಗಿದೆ, ಚೆನ್ನಾಗಿ ಹೇಳಿದಾರೆ ಅನ್ಸುತ್ತೆ ಅಲ್ವಾ. ಯಾಕೆ - ಇಲ್ಲಿ 'ನಾರೀ ಸ್ತನಭರ ', 'ನಾಭೀದೇಶಂ' ಅನ್ನೋ ಪದವಾಗಲಿ ತತ್ಸಮಾನ ಪದಗಳಾಗಲೀ ಇಲ್ಲ.

ನಂದೊಂದು ಅನಿಸಿಕೆ.  ಶ್ರೀ ಶಂಕರ ಭಗವದ್ಪಾದರು ಇಂದ್ರಿಯ ನಿಗ್ರಹ ಸಾಧ್ಯ ವಾಗಿಸಿಕೊಂಡವರು, ಸ್ಥಿತಪ್ರಜ್ಞರೂ ಹೌದು. ಸನ್ಯಾಸಸಿಗಳಾದರೂ  ವಿಷಯಾಸಕ್ತಿ, ಕಾಮ ಕ್ರೋಧಾದಿಗಳ ಬಗ್ಗೆ ಚೆನ್ನಾಗಿಯೇ ಅರ್ಥೈಸಿಕೊಂಡವರು. 
ಮಂಡನ ಮಿಶ್ರರನ್ನು ವಾದದಲ್ಲಿ ಸೋಲಿಸಿದಾಗಿನ ಪ್ರಸಂಗವನ್ನೇ ನೋಡಿ - 
ಶ್ರೀ ಶಂಕರರು ಮಂಡನ ಮಿಶ್ರರನ್ನು ಸೋಲಿಸಿದಾಗ, ಅವರ ಪತ್ನಿಯಾದ ಉಭಯಭಾರತೀಯವರು, ಮಂಡನ ಮಿಶ್ರರ ಅರ್ಧಾoಗಿಯಾಗಿರುವುದರಿಂದ ನನ್ನದೂ ಒಂದುಪ್ರಶ್ನೆಯಿದೆ, ಅದಕ್ಕೆ ಉತ್ತರಿಸಬೇಕಾಗುತ್ತೆ ಅಂತ ಒಂದು ಕಾಮರೂಪದ ಪ್ರಶ್ನೆ ಕೇಳ್ದಾಗ, ಅವರ ಪರಕಾಯ ಪ್ರವೇಶ ಪ್ರಸಂಗ ಬರುತ್ತೆ ಆಲ್ವಾ (ಶಂಕರ ಚರಿತ್ರೆ ಎಲ್ರಿಗೂ ಸ್ವಲ್ಪ ಗೊತ್ತೇ ಇರುತ್ತೆ, ಹೆಚ್ಚಿನ ವಿವರಣೆ ಬೇಡ). 
AdiShankaraMandanaMishraDebate

ಅವರು ಉಜ್ಜಯಿನಿ ರಾಜನ ಪರಕಾಯ ಪ್ರವೇಶ ಮಾಡಿದಾಗ ರಾಣಿಯರು, ದಾಸಿಯರು ಎಲ್ಲರೂ ಅವರ ಹಿಂದೆಮುಂದೆ ಇರುವಾಗ ಅವರ ಇಂದ್ರಿಯ ನಿಗ್ರಹ ಎಷ್ಟು ಕಷ್ಟ ಸಾಧ್ಯ ವಾಗಿರಬಹುದು, ಹೇಗಿದ್ದಿರಬಹುದು,  ಮಾಗಾ ಮೋಹಾವೇಶಮ್ . . . . (ಮನಸೇ ಮೋಹವೇಶಕ್ಕೆ ಒಳಗಾಗಬೇಡ)  ಅಂತ ತಮಗೆ ತಾವೇ ಅದೆಷ್ಟು ಸಲ ಹೇಳಿಕೊಂಡಿರಬಹುದೋ ಅನ್ಸುತ್ತೆ. ಆ ಸಂದರ್ಭದ ಇಂದ್ರಿಯ ನಿಗ್ರಹ ಎಂಥಾ ಅದ್ಭುತ ಅನ್ಸುತ್ತೆ. ಹಾಗಿರುವಾಗ, ಶಂಕರರು ವಿಷಯಾಸಕ್ತಿ, ಕಾಮದಬಗ್ಗೆ ಚರ್ಚಿಸಿರೋದು, ಕಾಮ ವಿಕಾರ ವಾದ್ರೆ, ಕ್ರೋಧವಾದ್ರೆ  ಅನಾಹುತ ತಪ್ಪಿದ್ದಲ್ಲ ಅಂತ ಸ್ವಲ್ಪ ಗಟ್ಟಿಯಾಗಿ ಎಚ್ಚರ್ಸಿರೋದ್ರಲ್ಲಿ ತಪ್ಪೇನಿಲ್ಲ ಅನ್ಸುತ್ತೆ.  (ಇದು ನನ್ನಅನಿಸಿಕೆ ಮನಸ್ನಲ್ಲಿ ಬಂದದ್ದು - ಹೆಚ್ಚಿನ ಪ್ರಾಮುಖ್ಯತೆ ಬೇಡ).   
ಕೆಲವರಿಗೆ, ಹಣಸಂಪಾದನೆಯೇ ಗುರಿಯಾಗಿ, ಸಂಗ್ರಹಿಸಿದ್ದನ್ನು ಸದ್ವಿನಿಯೋಗಿಸದೇ, ಮನೋ ಧಾವತಿ ಸರ್ವತ್ರ ಮದೋನ್ಮತ್ತಗಜೇಂದ್ರವತ್  ಅಂತ ಸುಭಾಷಿತ ಹೇಳುತ್ತಲ್ಲ ಹಾಗೆ, ಇವರ ಮನಸ್ಸೂ ಮದವೇರಿದ ಆನೆಯಂತೆ ಎತ್ತೆತ್ತಲೋ ಓಡೋದಕ್ಕೆ ಶುರು ಆದ್ರೆ, ಇದು, ವಿಷಯ ಲೋಲುಪತೆಗೆ ತಿರುಗಿದ್ರೆ ಅನಾಹುತ ತಪ್ಪಿದ್ದಲ್ಲ. ರಾಮಾಯಣ, ಮಹಾಭಾರತ, ಚರಿತ್ರೆ ಇವುಗಳಲ್ಲೆಲ್ಲಾ ಇದರ ಬಗ್ಗೆ ಓದಿರ್ತೀವಿ. ಅಷ್ಟೆಲ್ಲಾ ಯಾಕೆ, ಪತ್ರಿಕೆಗಳಲ್ಲೂ ಅತ್ಯಾಚಾರ, ಅನಾಚಾರಗಳಬಗ್ಗೆ ಸುದ್ಧಿಗಳು ಹರಿದಾಡ್ತಾನೆ ಇರುತ್ತೆ ಅಲ್ವಾ. ಹೀಗಾಗಬಾರ್ದು ಅಂತ ಎಚ್ಚರಿಸ್ತಿದಾರೆ ಶ್ರೀ ಶಂಕರರು. 

 ಈ ಶ್ಲೋಕದ ಬಗ್ಗೆ ಅತಿಯಾದ ಅರ್ಥ ಕಲ್ಪಿಸಿಕೊಳ್ಳೋದು ಬೇಡ. ಶ್ರೀ ಶಂಕರರು ವಿಷಯಾಸಕ್ತಿಯನ್ನು ಖಂಡಿಸಲು ಹೋಗುವುದಿಲ್ಲ. ಕಾಮ ವಿಕಾರ ವಾದ್ರೆ, ಕ್ರೋಧವಾದ್ರೆ  ಅನಾಹುತ ತಪ್ಪಿದ್ದಲ್ಲ ಅಂತ ಎಚ್ಚರಿಸ್ತಿದಾರೆ ಅನ್ನೋದನ್ನ ಗಮನದಲ್ಲಿಟ್ಕೊಳೋಣ. ಭಗವಾನ್ ಶ್ರೀಕೃಷ್ಣ ಭಗವದ್ಗೀತೆಯ ಏಳನೆಯ ಅಧ್ಯಾಯದಲ್ಲಿ ಈ ಬಗ್ಗೆ ಹೇಳಿರುವ ಶ್ಲೋಕ ವನ್ನು ಇಲ್ಲಿ ನಾವು ನೆನಪಿಸಿಕೊಳ್ಳಬಹುದು:

बलं बलवतां चाहं कामरागविवर्जितम् |
धर्माविरुद्धो भूतेषु कामोऽस्मि भरतर्षभ || 7.11|| 

ಲೈಂಗಿಕ ಕ್ರಿಯೆಯು ಕೇವಲ ಇಂದ್ರಿಯ ಸುಖಕ್ಕಾಗಿ ಮಾತ್ರ ಕೈಗೊಳ್ಳಲ್ಪಟ್ಟು, ಯಾವುದೇ ನಿಯಂತ್ರಕ ತತ್ವಗಳಿಂದ ಮುಕ್ತವಾದಾಗ, ಅದನ್ನು ಪಶುತ್ವ ಅಥವಾ ಪಶುತ್ವ ಎಂದು ಪರಿಗಣಿಸಲಾಗುತ್ತದೆ. ಆದರೆ, ಗೃಹಸ್ಥನು ಸಂತಾನೋತ್ಪತ್ತಿಗಾಗಿ ನಡೆಸಿದಾಗ, ಅದನ್ನು ಧರ್ಮಗ್ರಂಥಗಳ ಸೂಚನೆಗಳಿಗೆ ಅನುಗುಣವಾಗಿ ಪರಿಗಣಿಸಲಾಗುತ್ತದೆಯೇ ಹೊರತು ವಿರುದ್ಧವಾದ ಸದ್ಗುಣವಲ್ಲ. ಇಲ್ಲಿ, ಶ್ರೀ ಕೃಷ್ಣನು ವಿವಾಹದ ಸಂಸ್ಥೆಯೊಳಗೆ, ಗೃಹಸ್ಥನ ನಿಯಂತ್ರಿತ, ಸದ್ಗುಣಶೀಲ ಮತ್ತು ಸದುದ್ದೇಶಪೂರಿತ ಲೈಂಗಿಕ ಚಟುವಟಿಕೆ ಎಂದು ಉಲ್ಲೇಖಿಸಿದ್ದಾನೆ. 

ಇದು ಸಹಜ ಕ್ರಿಯೆ ಅನ್ನೋದಾದ್ರೆ ನಿಗ್ರಹಿಸೋದು ಹೇಗೆ?  ಅದಕ್ಕೆ  ಅವರು ಹೇಳೋದು, ಸ್ವಲ್ಪ ದೃಷ್ಟಿ ಕೋನವನ್ನ ಬದಲಾಯಿಸ್ಕೊಂಡು ಪ್ರತಿಪಕ್ಷ ಸ್ವಭಾವದಿಂದ ನೋಡ್ತಾ ಒಂದು ದೃಷ್ಟಿಕೋನದಿಂದ ನೋಡ್ದಾಗ ಬಾಹ್ಯ ಸೌಂದರ್ಯ ಕಾಣ್ಸಿದ್ರೂ , ಇನ್ನೊಂದು ದೃಷ್ಟಿ ಕೋನ  ದಿಂದಲೂ ನೋಡು, ಈ ದೇಹ ಅನ್ನೋದು ಮೂಳೆ ಮಾಂಸದ ತಡಿಕೆ  ಅನ್ನೋದನ್ನ ಮನಸ್ನಲ್ಲಿ ಮತ್ತೆ ಮತ್ತೆ ತಂದ್ಕೊ. ("ಏತನ್ಮಾಂಸ ವಸಾದಿ ವಿಕಾರಂ ಮನಸಿ ವಿಚಿಂತಯಾ ವಾರಂ ವಾರಮ್"). ಆಗ ಮನಸ್ಸಿನ ವಿಕಾರ ದೂರ ಆಗುತ್ತೆ ಅಂತ ಹೇಳ್ತಾರೆ. 

ವಾರಂ ವಾರಮ್ ಅಂತ ಯಾಕೆ ಹೇಳ್ತಿದಾರೆ ಅಂದ್ರೆ, ಯಾವುದೇ ಆದ್ರೂ ಮತ್ತೆ ಮತ್ತೆ ಮನನ ಮಾಡೋದ್ರಿಂದ ಮಾತ್ರ ಅದು ಮನೋವೃತ್ತಿ ಆಗೋದಕ್ಕೆ ಸಾಧ್ಯ.  (anything that you do continuously becomes habit, habit continued becomes attitude ಅಂತಾರಲ್ಲ ಹಾಗೆ). 
ಶ್ರೀ ಶಂಕರ ಭಗವದ್ಪಾದರು ಭಗವದ್ಗೀತೆಯ ಭಾಷ್ಯವನ್ನೂ ಅನುಗ್ರಹಿಸಿರೋದು ಹಾಗೆಯೇ  2 ನೇ ಅಧ್ಯಾಯದಲ್ಲಿ ಶ್ರೀ ಕೃಷ್ಣ ಪರಮಾತ್ಮನೂ ಇದಕ್ಕೆ ಒತ್ತುಕೊಟ್ಟು ಹೇಳಿರುವುದನ್ನೂ ಗಮನಿಸಬಹುದು. 
ಒಬ್ಬನು ಕಾಮುಕನಾದಾಗ ('ವಿಷಯಾನ್' ಅನ್ನೋ ಪದವನ್ನ  ಸ್ತ್ರೀ-ಪುರುಷ ಸಂಬಂಧದ ಸಂದರ್ಭಕ್ಕೂ ಅನ್ವಯಿಸಿಕೊಂಡ್ರೆ), ಎಲ್ಲಾ ಬುದ್ಧಿಶಕ್ತಿಯನ್ನು ಕಳೆದುಕೊಳ್ತಾನೆ. ಅವನಲ್ಲಿ - ಅಸೂಯೆ, ಕಾಮ, ಕ್ರೋಧ, ಲೋಭ, ಮೋಹ, ಮಾತ್ಸರ್ಯ ಎಲ್ಲಾ ಭುಗಿಲೆದ್ದುಬಿಡತ್ತೆ.  - 
ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ । 
ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋSಭಿಜಾಯತೇ ॥೨.೬೨॥
ಕ್ರೋಧಾದ್ ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿವಿಭ್ರಮಃ ।
ಸ್ಮೃತಿಭ್ರಂಶಾದ್ ಬುದ್ಧಿನಾಶೋ ಬುದ್ಧಿನಾಶಾದ್ ವಿನಶ್ಯತಿ ॥೨.೬೩॥
ಹಾಗೆಯೇ, ನಮ್ಮಲ್ಲಿ ಬೇಕಾದಷ್ಟು ನೀತಿ ಬೋಧನೆಗಳು, ದೃಷ್ಟಾಂತ ಕಥೆಗಳು ನಮ್ಮಲ್ಲಿವೆ. ವ್ಯಾಖ್ಯಾನಕಾರರು ಉದಾಹರಿಸುವ, ಪೂರಕವಾದ ನಹುಷ ಚಕ್ರವರ್ತಿಯ ಕಥೆ ನನಗೂ ಇಷ್ಟವಾಗುತ್ತೆ. ಕಥೆ ಎಲ್ಲರಿಗೂ ಗೊತ್ತಿರಬಹುದಾದದ್ದೇ ಅನ್ಕೋತೀನಿ. ಸ್ವಲ್ಪ ನೋಡೋಣ.  ಕಥೆ ಹೀಗೆ ಮುಂದುವರೆಯುತ್ತೆ -
ಒಮ್ಮೆ ಇಂದ್ರ  ತನಗೆ ಬಂದ ಬ್ರಹ್ಮಹತ್ಯಾದೋಷದ ಪರಿಹಾರಾರ್ಥ, ಮಾನಸ ಸರೋವರದಲ್ಲಿ ಒಂದು ತಾವರೆ ದಂಟಿನಲ್ಲಿ ಅಡಗಿಕೊಂಡಿರ್ತಾನೆ. ಈ ಸಂದರ್ಭದಲ್ಲಿ  ನಹುಷನಿಗೆ ಇಂದ್ರ ಪದವಿ ಸಿಕ್ಕಿತ್ತು.  ಇಂದ್ರಪದವಿ ಅನುಭವಿಸ್ತಾ ಇವ್ನು ಸುಮ್ನಿರಬಾರದಿತ್ತಾ, ಎಷ್ಟೇ ಆದ್ರೂ ಮನುಷ್ಯ ಮನುಷ್ಯನೇ. ಸತ್ವ, ರಜಸ್, ತಾಮಸ ಗುಣಗಳ ಮಿಶ್ರಣವೇ ಮನುಷ್ಯ ಆಲ್ವಾ. ಇಲ್ಲೂ ಅವನ ಕಾಮ ವಿಕಾರ ವಾಯ್ತು. ಮನಸ್ನಲ್ಲಿ, ನಾನು ಇಂದ್ರ ಅಂತ ಆದ್ಮೇಲೆ, ಇಂದ್ರನ ರಾಣಿಯಾದ ಶಚಿ ದೇವಿಯೂ ತನಗೆ ಒಲಿಯಬೇಕಲ್ವೇ ಅಂತ ದುರಭಿಲಾಷೆ ಇವ್ನಿಗೆ ಶುರುವಾಗುತ್ತೆ.  ಶಚಿ ದೇವಿ ಗೆ, ನಿರೂಪ ಕಳಿಸ್ತಾನೆ. ಶಚಿ ದೇವಿ ಗಾಬರಿಯಾಗಿ, ನಾರದರ ಮೊರೆ ಹೋಗೋದು, ಅವರ ಸಲಹೆಯಂತೆ, ಸಪ್ತರ್ಷಿಗಳು ಹೊತ್ತಿರುವ ಪಲ್ಲಕ್ಕಿಯಲ್ಲಿ ಬಂದರೆ ಆಗಬಹುದು ಅಂತ ಹೇಳೋದು ಎಲ್ಲಾ ಗೊತ್ತಿರೋದೇ ಆಲ್ವಾ. 
ಮುಂದೆ, ನೋಡಿ  ನಹುಷ ಪಲ್ಲಕ್ಕಿಯಲ್ಲಿ ಕುಳಿತು,  ಸಪ್ತರ್ಷಿಗಳನ್ನ ವಾಹಕರಾಗಿಸಿಕೊಂಡು ಹೊರಟ ನಹುಷನ ಕಾಮಾತುರತೆ ಮಿತಿ ಮೀರಿರುತ್ತೆ. ಸಪ್ತರ್ಷಿಗಳಿಗೆ, ಪಾಪ, ಯಾರಿಗೂ ಪಲ್ಲಕ್ಕಿ ಹೊತ್ತು ಅಭ್ಯಾಸವೂ ಇಲ್ಲ, ಆದ್ರೆ ಇಂದ್ರಾಜ್ಞೆ ಅಲ್ವಾ ಪಲ್ಲಕ್ಕಿ ಹೊತ್ಕೊಂಡು ಸಾಗ್ತಿರ್ತಾರೆ. ಸಪ್ತರ್ಷಿಗಳಲ್ಲಿ, ಅಗಸ್ತ್ಯರು ಸ್ವಲ್ಪ ಕುಳ್ಳು, ಸ್ಥೂಲಕಾಯಿ ಅಂತಲೂ ಹೇಳ್ತಾರೆ. ಹಾಗಾಗಿ ಪಲ್ಲಕ್ಕಿ ನಿಧಾನವಾಗಿ ಹೋಗ್ತಿರುತ್ತೆ. ನಹುಷನಿಗೆ urgent, ಕಾಮ ಕ್ರೋಧವಾಯ್ತು, ಅವ್ನು ಸುಮ್ನಿರೋಲ್ಲ (ನಿಧಾನವಾಗಿ ಹೋಗ್ತಿದೀರಾ ಅಂತ) ಸರ್ಪ, ಸರ್ಪ  ಬೇಗ ನಡೀರಿ, ಬೇಗ  ನಡೀರಿ ಅಂತ ಹೇಳ್ತಾ ಅಗಸ್ತ್ಯರಿಗೆ ಕಾಲಿನಿಂದ ಒದಿತಾನೆ. ಕಾಮ ಕ್ರೋಧವಾಯ್ತು, ಆಗಬಾರದ್ದು ಆಗೇ ಹೋಯ್ತು. 
ಕೋಪೋದ್ರಿಕ್ತರಾದ ಅಗಸ್ತ್ಯರು ನಹುಷನಿಗೆ ' ಸರ್ಪೋಭವ ' ಅಂತ ಶಪಿಸ್ತಾರೆ. ನಹುಷನಿಗೆ ಆಗ ತನ್ನ ತಪ್ಪಿನ ಅರಿವಾಗುತ್ತೆ,  ತನ್ನ ತಪ್ಪನ್ನ ತಿಳ್ಕೊಂಡು ಶಾಪ ವಿಮೋಚನೆಗಾಗಿ ಯಾಚಿಸ್ತಾನೆ. ಆಗ ಅಗಸ್ತ್ಯರು, ಧರ್ಮರಾಯ ನಿನಗೆ ಧರ್ಮ ಚಿಂತನೆಯ ಬಗ್ಗೆ ನಿನ್ನ ಜಿಜ್ಞಾಸೆಗಳಿಗೆ ಸರಿಯುತ್ತರ ಕೊಟ್ಟಾಗ, ಶಾಪ ವಿಮೋಚನೆಯಾಗಿ ಮತ್ತೆ ಸ್ವರ್ಗಕ್ಕೆ ಬರ್ತೀಯ ಅಂತ ಹೇಳ್ತಾರೆ. ಅವನು ಸರ್ಪವಾಗಿ, ಭೂಲೋಕಕ್ಕೆ ಬರ್ತಾನೆ. ಮುಂದೆ, ಪಾಂಡವರು ವನವಾಸದಲ್ಲಿದ್ದಾಗ ಒಮ್ಮೆ ಬೇಟೆಗೆಂದು ಬಂದ ಭೀಮನನ್ನು ಹೆಬ್ಬಾವಿನ ರೂಪದಲ್ಲಿದ್ದ ನಹುಷ ಸುತ್ತುಕೊಳ್ಳೋದು, ಬಿಡಿಸಿಕೊಳ್ಳಲು ಭೀಮ ಅಸಮರ್ಥನಾಗಿ, ಹೆಬ್ಬಾವಿನ ಪ್ರಶ್ನೆಗಳಿಗೂ ಉತ್ತರಿಸಲಾಗದೇ ಒದ್ದಾಡ್ತಿರ್ತಾನೆ.  ಆಗ, ತಮ್ಮನನ್ನು ಹುಡುಕುತ್ತ ಬಂದ ಧರ್ಮರಾಯ ಪ್ರಶ್ನೆಗಳಿಗೆಲ್ಲ ಸಮರ್ಪಕವಾಗಿ ಉತ್ತರಿಸ್ತಾನೆ, ಹಾವು ಭೀಮನನ್ನು ಬಿಡುತ್ತೆ, ನಹುಷ  ಶಾಪದಿಂದ ವಿಮೋಚನೆ ಪಡೀತಾನೆ, ಸ್ವರ್ಗಕ್ಕೆ ಹೋಗ್ತಾನೆ. ಇದು ಅಲ್ಲಿ ಬರುವ ಕಥೆ.  
ಅರ್ಥ ಇಷ್ಟೇ - ಕಾಮ ವಿಕಾರ ವಾದ್ರೆ, ಕ್ರೋಧವಾದ್ರೆ  ಅನಾಹುತ ತಪ್ಪಿದ್ದಲ್ಲ. ರಾವಣನಿಗಾದದ್ದೂ ಇದೆ ಅಲ್ವ, ಕಾಮ ರೂಪಿ ಯಾಗಿ ಪರಸ್ತ್ರೀವ್ಯಾಮೋಹದಲ್ಲಿ ಸಿಕ್ಕು ತನ್ನ ಜೀವಿತವನ್ನೇ ಕಳ್ಕೊಂಡ ಅಲ್ವಾ. 
ಈ ಶ್ಲೋಕದ ಅಂತರಾರ್ಥ ಕೂಡ ಇದೇ ಅಂದುಕೊಳ್ಳಬಹುದಲ್ವೆ.
ನಂಗೆ, ಶತಕತ್ರಯ ಕರ್ತೃ ಭರ್ತೃಹರಿ ಕಥೆನೂ ಈ ಸಂದರ್ಭದಲ್ಲಿ ಪೂರಕವಾಗಿಲ್ಲ ಅನ್ನಿಸಬಹುದಾದ್ರೂ, ಕಾಮ, ಕಾಮುಕತೆ ಹೇಗೆಲ್ಲಾ ಆಡ್ಸುತ್ತೆ ಅನ್ನೋದಕ್ಕೆ ಒಂದು ಉದಾಹರಣೆ ಅನ್ಕೋ ಬಹುದು. ಅದನ್ನ ನಾನೂ ಜ್ಞಾಪಿಸಿಕೊಳ್ತಾ ನಿಮಗೂ ಹೇಳ್ತಿದೀನಿ. 
ಇದನ್ನ ಕೆಲವರು ಕಾಲ್ಪನಿಕ ಕಥೆ ಅಂತ ಹೇಳ್ತಾರೆ, ಬೇರೆಬೇರೆ ರೀತಿಯಾಗೂ ಹೇಳೋದಿದೆ. ಆದ್ರೆ ಇದನ್ನ 
ಒಂದು ದೃಷ್ಟಾಂತ ಕಥೆ ಅಂತ ಭಾವಿಸಬಹುದು, ತಪ್ಪೇನಿಲ್ಲ ಅಂತ ನಂಗಂತೂ ಅನ್ಸುತ್ತೆ. 
ಭರ್ತೃಹರಿ - ಈತನು ಮೊದಲು ರಾಜನಾಗಿದ್ದ ಮತ್ತು ಶೂರ ಸಶಕ್ತ ಸ್ಪುರದ್ರೂಪಿಯಾಗಿದ್ದ, ಧರ್ಮಭೀರುವೂ ಹೌದು.  ಅವನ ಸತಿಯೂ ಅಷ್ಟೇ ರೂಪವತಿಯಾಗಿದ್ದಳು. ರಾಜನಿಗೆ ಅವಳಮೇಲೆ ಅತಿಯಾದ ಮೋಹ, ಪ್ರೀತಿ.  

ಒಂದು ದಿನ ರಾಜ ವಿಹಾರಕ್ಕೆಂದು ಅರಣ್ಯಕ್ಕೆ ಹೋಗಿರ್ತಾನೆ. ಅರಣ್ಯ ಮದ್ಯದಲ್ಲಿ ಒಂದು ಕುಟೀರ, ಅದರಲ್ಲಿ ಓರ್ವ ತಪಸ್ವಿ. ರಾಜನು ಅವರಿಗೆ ಅಭಿನಂದಿಸಿ ಕೈ ಮುಗಿತಾನೆ, ನಮಸ್ಕರಿಸ್ತಾನೆ. ಉಭಯ ಕುಶಲೋಪರಿ ನಂತರ, ರಾಜನ ನಯ ವಿನಯ ಕಂಡು ತಪಸ್ಸಿ ಸಂತುಷ್ಟನಾಗಿ ಒಂದು ಹಣ್ಣನ್ನು ಕೊಟ್ಟು ಇದನ್ನು ಸೇವಿಸಿದ್ರೆ  ನೀನು ನೂರು ವರುಷ ಸುಂದರ ತರುಣನಾಗಿಯೇ ಇರ್ತೀಯ ಅಂತ ಆಶಿರ್ವಾದಿಸ್ತಾನೆ. ರಾಜ ಹಣ್ಣನ್ನು ಸ್ವೀಕರಿಸಿ ಸಂತಸದಿಂದ ತಪಸ್ವಿಗೆ ವಂದಿಸಿ ವಾಪಸ್ಸಾಗ್ತಾನೆ. 

ಅರಮನೆಗೆ ಬರ್ತಾ ರಾಜ ಮನಸ್ನಲ್ಲಿ ಅಂದುಕೊತಾನೆ  'ನಾನು ತರುಣನಾಗಿ, ನನ್ನ ಮಹಾರಾಣಿ ಮುಪ್ಪಾಗಿ ಇರುವುದು ಸರಿಯಲ್ಲ' . ಇದನ್ನ ತನ್ನ ಪ್ರೀತಿಯ ಮಹಾರಾಣಿಗೆ ಕೊಡುವುದೇ ಸೂಕ್ತ ಅನ್ಸಿ, ಅರಮನೆಗೆ ಬರುತ್ಲೇ ಆ ಹಣ್ಣನ್ನು ರಾಣಿಯ ಕೈಗೆ ಕೊಟ್ಟು ಅದರ ಮಹತ್ವವನ್ನು ಹೇಳ್ತಾನೆ.  ಮುಂದೆ ನೋಡಿ ಏನಾಯ್ತು ಅಂತ. 

ರಾಣಿ ಅದನ್ನ ತಿನ್ನೋದೇ ಇಲ್ಲ. ರಾಣಿ, ಈ ಹಣ್ಣನ್ನು ನಾನು ಆಮೇಲೆ ಸೇವಿಸ್ತೀನಿ ಅಂತ ಹೇಳ್ತಾಳೆ.  ಪಾಪ ರಾಜ, ಆಗ್ಬಹುದು ಅಂತ ಸಮ್ಮತಿಸ್ತಾನೆ. ಅವಳಿಗೆ ರಾಜನ ಮೇಲೆ ಮೋಹವಾಗ್ಲಿ, ಪ್ರೀತಿಯಾಗ್ಲಿ ಇರ್ಲಿಲ್ಲ. ಅವ್ಳಿಗಾದ್ರೋ ಅರಮನೆಯ ಒಬ್ಬ ಸೇವಕ ತರುಣನಲ್ಲಿ ಪ್ರೀತಿ, ಆಸಕ್ತಿ ಅತಿರೇಕವಾಗಿತ್ತು. ಎಷ್ಟರಮಟ್ಟಿಗೆ ಅಂದ್ರೆ ಆ ಹಣ್ಣನ್ನ ಅವ್ನಿಗೆ ಕೊಟ್ಟು ಬಿಡ್ತಾಳೆ. 

ಅವನದ್ದು ಇನ್ನೊಂದು ಕಥೆ. ಅವ್ನಿಗೆ, ರಾಣಿಯ ಮೇಲೆ ಆಸಕ್ತಿ ಇರಲ್ಲ, ಒಬ್ಬ ರಾಜ ನರ್ತಕಿಯ ಮೇಲೆ ಮೋಹ. ಅವ್ನು ಅದನ್ನ ಅವ್ಳಿಗೆ ಕೊಡ್ತಾನೆ. 

ಆ ನರ್ತಕಿಗೋ ಇವನ ಮೇಲೆ ಕನಿಷ್ಠ ಪ್ರೀತಿಯೂ ಇರಲ್ಲ. ಅವ್ಳಿಗೆ ಮಹಾರಾಜನ ಮೇಲೆ ಮೋಹ, ವಾತ್ಸಲ್ಯ.  ಮಾರನೇ ದಿನ, ಆ ರಾಜ ನರ್ತಕಿ ಅದನ್ನ ಮಾಹಾರಾಜನ್ಗೇ ಸಮರ್ಪಿಸಿ, ಇದು ಅಮೃತ ಫಲ ಇದನ್ನು ಸೇವಿಸಿದವರು ಚಿರಯೌವನ ಪಡೀತಾರಂತೆ, ನಾನು ಸೇವಿಸುವುದರಿಂದ ಯೌವನ  ಪಡೆಯೋದ್ರಿಂದ ಈ ಸಮಾಜಕ್ಕೆ ಪ್ರಯೋಜನವೇನೂ ಇಲ್ಲ, ತಾವೇ ಇದನ್ನು ಸ್ವೀಕರಿಸಿ ದೇಶ ಸಂರಕ್ಷಿಸುವಂತಾಗಲೀ ಅಂತ ಬಿನ್ನವಿಸ್ಕೊಳ್ತಾಳೆ.  ರಾಜ ವಿಸ್ಮಯ ಗೊಳ್ತಾನೆ, ತಾನು ನೆನ್ನೆ ತನ್ನ ಮಹಾರಾಣಿಗೆ ಕೊಟ್ಟ ಹಣ್ಣು ಇವಳ ಕೈಗೆ ಹೇಗೆ ಬಂತು ಇದು ವಿಚಿತ್ರ ವಾಗಿದೆ, ವಿಲಕ್ಷಣವಾಗಿದೆಯಲ್ಲಾ ಅಂತ  ಅನ್ಸೋಕೆ ಶುರು ಆಗುತ್ತೆ. ಮುಂದೆ ಏನಾಯ್ತು ನೋಡಿ -  

ಆಶ್ಚರ್ಯ ಚಕಿತನಾದ ರಾಜನಿಗೆ ನಡೆದಿರಬಹುದಾದ ಘಟನೇನ ಪರಾಮರ್ಶಿಸ ಹೊರಟಾಗ, ಆಗಿರಬಹುದಾದ ಘಟನೆಗಳು ಗೋಚರಿಸ್ತಾ ಹೋಗುತ್ತೆ. ಎಲ್ಲವೂ ಗೊತ್ತಾಗುತ್ತೆ, ವಿಹ್ವಲ ಗೊಳ್ತಾನೆ. 'ಯಾರನ್ನು ನಾನು ಸತತ ನೆನೆಯುತ್ತಾ ಮೋಹಿತನಾಗಿದ್ನೋ ಅಂಥ ಮಹಾರಾಣಿ ನನ್ನಲ್ಲಿ ವಿರಕ್ತಳು, ಇನ್ನೊಬ್ಬನಲ್ಲಿ ಆಸಕ್ತಳು. ಆ ಇನ್ನೋಬ್ಬನಾದರೋ ಮತ್ತೊಬ್ಬಳಲ್ಲಿ ಆಸಕ್ತನು, ಆ ಮತ್ತೊಬ್ಬಳಾದರೋ ನನ್ನ ಒಳಿತನ್ನು ಹಂಬಲಿಸುವಲ್ಲಿ ಆಸಕ್ತಳು.

ಯಾರಿಗೆ ಯಾರೆಲ್ಲ ಮೇಲೆ ಪ್ರೀತಿ, ಅಬ್ಬಾ ಕಾಮಕ್ಕೂ, ಮೋಹಕ್ಕೂ ಧಿಕ್ಕಾರವಿರಲಿ ಅಂತ ಹೇಳ್ತಾ  'ತಪಸ್ವಿಯು ನಂಗೆ ಈ ಹಣ್ಣನ್ನು ಕೊಟ್ಟು ನನ್ನ ಕಣ್ಣು ತೆರೆಸಿದ' ಅಂತ ಜಾಗೃತನಾಗಿ, ಯಾರಿಗೂ ಯಾವುದೇ ಶಿಕ್ಷೆ ವಿಧಿಸದೇ,  ಲೌಕಿಕ ಸುಖದ ವ್ಯಾಮೋಹ ತೊರೆದು ವೈರಾಗ್ಯ ತಾಳಿ ಅರಮನೆ ಬಿಟ್ಟು ಪರಮ ಸತ್ಯ ಅರಸಿಕೊಂಡು ರಾಜ 'ಮಹಾ ಸಂತ' ನಾದ. ಅವನೇ ಸುಭಾಷಿತ ತ್ರಿಶತೀ ಎಂಬ ಪ್ರಸಿದ್ಧ  ಕೃತಿಯಲ್ಲಿ ನೀತಿಶತಕ, ಶೃಂಗಾರಶತಕ, ವೈರಾಗ್ಯಶತಕಗಳೆಂಬ ಮೂರು ಶತಕಗಳ ಹಾಗೂ ಇನ್ನಿತರೇ ಅನೇಕ ದಾರ್ಶನಿಕ ಕೃತಿಗಳ ರಚನಾಕಾರನಾದ ಭರ್ತೃಹರಿ.

ನಮ್ಮಲ್ಲಿ ನಾಲ್ಕು ಪುರಷಾರ್ಥಗಳನ್ನ ಹೇಳುವಾಗ,ಎಲ್ಲಕ್ಕೂ ಮೊದಲು ಧರ್ಮ. ಮುಂದಿನ ಎಲ್ಲವನ್ನೂ ಧರ್ಮದ ದೃಷ್ಟಿ ಯಿಂದಲೇ ನೋಡಬೇಕು ಅನ್ನೋ ಅರ್ಥ ಇದರಲ್ಲಿ ಅಡಗಿದೆ ಅಂತ ಹೇಳ್ತಾರೆ. ಅರ್ಥ ಕಾಮಗಳು ಧರ್ಮದ ಚೌಕಟ್ಟಿನಲ್ಲಿದ್ದಾಗ ಇವು ಪುರುಷಾರ್ಥಗಳಾಗುತ್ತವೆ. ಇವುಗಳ ಇತಿ ಮಿತಿ ಗಳ ಅರಿವು  ಇರಬೇಕು ಮತ್ತು  ಕಾಮ ವಿಕಾರ ವಾದ್ರೆ, ಕ್ರೋಧವಾದ್ರೆ  ಅನಾಹುತ ತಪ್ಪಿದ್ದಲ್ಲ ಅಂತ ಎಚ್ಚರಿಸ್ತಿದಾರೆ ಅನ್ನೋದನ್ನ ಗಮನದಲ್ಲಿಟ್ಕೊಳೋಣ.

ಅನಂತ ಸಂತೋಷವನ್ನು ತಲುಪುವ ಗುರಿಯುಳ್ಳ ಸಾಧಕನಾದವನು ಅನಿಯಮಿತ ಸಂಪತ್ತನ್ನು ಗಳಿಸುವ ದಾಹವನ್ನು ಮತ್ತು ಕಾಮುಕ ಲೈಂಗಿಕ ಪ್ರಚೋದನೆ ಯನ್ನು ಜಯಿಸಬೇಕು.  ಇವುಗಳ ಇತಿ ಮಿತಿ ಗಳ ಅರಿವು  ಇರಬೇಕು ಅಂತ ಎಚ್ಚರಿಸ್ತಿದಾರೆ. ಈ ಶ್ಲೋಕದ ಅಂತರಾರ್ಥ ಇದು ಅಂದುಕೊಳ್ಳಬಹುದಲ್ವೆ. 

ಹಿತಕಾಮ ಮಿತಕಾಮ ವಿಕಟಕಟಕಾಮ| ಸತ್ಕಾಮ ದುಷ್ಕಾಮ ಸುರಾಸುರರ ಕಾಮ||
ಎಂತಪ್ಪ ಜನರಿಹರೋ ಅಂತಪ್ಪ ಕಾಮ| ನಿಷ್ಕಾಮ ಕಾಮ್ಯತೆಯೆ ಗುರಿಯಿರಲಿ ಮೂಢ || 


ಓಂ ತತ್ಸತ್, ಶ್ರೀ ರಾಮಮೂರ್ತಿ

Leave a Comment

Your email address will not be published. Required fields are marked *

Scroll to Top